ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ಮೆಟ್ರೋ ಸಮಯ ವಿಸ್ತರಿಸಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ರಾತ್ರಿ ಪಂದ್ಯಗಳ ವೇಳೆ ಕ್ರಿಕೆಟ್ ವೀಕ್ಷಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 1:30ರ ವರೆಗೆ ವಿಸ್ತರಿಸಲಾಗಿದೆ. ಪಂದ್ಯ ನಡೆಯುವ ದಿನಗಳಂದು ಮೆಟ್ರೋ ರೈಲುಗಳು ಮೆಜೆಸ್ಟಿಕ್ ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕುಗಳಲ್ಲಿ ರಾತ್ರಿ 1.30 ಕ್ಕೆ ಹೊರಡಲಿವೆ.
ಇದರಿಂದಾಗಿ ವಿವಿಧಡೆಯಿಂದ ಕ್ರಿಕೆಟ್ ಪ್ರಿಯರು ಪಂದ್ಯ ಮುಗಿದ ನಂತರ ಮನೆಗೆ ತೆರಳಲು ಅನುಕೂಲವಾಗುತ್ತದೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗಗಳಲ್ಲಿ ನಮ್ಮ ಮೆಟ್ರೋ ರೈಲು ಸಮಯ ವಿಸ್ತರಿಸಲಾಗಿದೆ. ಏಪ್ರಿಲ್ 2, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 26 ಮತ್ತು ಮೇ 21ರಂದು ಪಂದ್ಯ ನಡೆಯುವ ದಿನಗಳಂದು ಮೆಟ್ರೋ ಸಂಚಾರ ವಿಸ್ತರಿಸಲಾಗಿದೆ.
ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಟೋಕನ್, ಕ್ಯೂಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಿ ಪ್ರಯಾಣಿಸಬಹುದು. ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಮಧ್ಯಾಹ್ನ 3 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನೀಡಲಾಗುತ್ತಿದೆ.