alex Certify ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: 14,788 ಕೋಟಿ ರೂ. ಮೆಟ್ರೋ ಯೋಜನೆಗೆ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: 14,788 ಕೋಟಿ ರೂ. ಮೆಟ್ರೋ ಯೋಜನೆಗೆ ಅಸ್ತು

ನವದೆಹಲಿ: ಬೆಂಗಳೂರು ನಗರದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ. ಆರ್. ಪುರ ಮತ್ತು ಹೆಬ್ಬಾಳ ಜಂಕ್ಷನ್ ಮೂಲಕ ವಿಮಾನ ನಿಲ್ದಾಣ ನಿಲ್ದಾಣ ತಲುಪುವ 58.19 ಕಿ.ಮೀ. ಉದ್ದನೆಯ ಈ ಮೆಟ್ರೋ ಯೋಜನೆಯ ವೆಚ್ಚ 14,788.1 ಕೋಟಿ ರೂಪಾಯಿ.

ಸಂಪುಟ ಸಭೆಯ ನಂತರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು, ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಇದು ನಮ್ಮ ಮೆಟ್ರೋ ಯೋಜನೆಯ ವಿಸ್ತರಣೆ. 2ಎ ಹಂತದ ಯೋಜನೆ – ಸಿಲ್ಕಬೋರ್ಡ್ ಜಂಕ್ಷನ್ನಿನಿಂದ ಕೆ.ಆರ್. ಪುರದವರೆಗಿನ 19.75 ಕಿಮಿ ಮಾರ್ಗದಲ್ಲಿ 13 ನಿಲ್ದಾಣಗಳು ಇರುತ್ತವೆ. 2 ಬಿ ಹಂತದ ಯೋಜನೆಯಲ್ಲಿ ಕೆ.ಆರ್. ಪುರದಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ 38.44 ಕಿಮಿ ಮಾರ್ಗದಲ್ಲಿ 17 ನಿಲ್ದಾಣಗಳು ಇರುತ್ತವೆ ಎಂದು ಅವರು ವಿವರಿಸಿದರು.

ಏಷಿಯಾದ ‘ಸಿಲಿಕಾನ್ ವ್ಯಾಲಿ’ ಎಂದೇ ಗುರುತಿಸಲಾಗುವ ಬೆಂಗಳೂರಿನಲ್ಲಿ ಸಾವಿರಾರು ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು ಹತ್ತಾರು ಲಕ್ಷ ಯುವಕ-ಯುವತಿಯರಿಗೆ ಉದ್ಯೋಗ ದೊರೆತಿದೆ. ರಿಯಲ್ ಎಸ್ಟೇಟ್ ಮತ್ತಿತರ ಪೂರಕ ಉದ್ಯಮಗಳು ಬೆಳೆಯುತ್ತಿದ್ದು ನಗರದ ಜನಸಂಖ್ಯೆ ಈಗಾಗಾಲೇ ಕೋಟಿ ದಾಟಿದೆ. ಸಹಜವಾಗಿಯೇ ವಾಹನಗಳ ಸಂಖ್ಯೆಯೂ ಏರಿಕೆಯಾಗಿದ್ದು ಸಂಚಾರ ದಟ್ಟಣೆ ಉಂಟಾಗಿದೆ. ನಮ್ಮ ಮೆಟ್ರೋ ಜಾಲದ ಈ ಮಾರ್ಗವು ನಗರದ ವಾಹನ ದಟ್ಟಣೆಯನ್ನು ಬಹುವಾಗಿ ಕಡಿಮೆಗೊಳಿಸಲಿದೆ. ಇದು ಬೆಂಗಳೂರಿನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಸದಾನಂದಗೌಡ ತಿಳಿಸಿದರು.

ಸಿಲ್ಕಬೋರ್ಡ್ ಜಂಕ್ಷನ್ – ಏರ್ಪೋರ್ಟ್ ಮಾರ್ಗದ ಬಹುತೇಕ ಭಾಗವು ನಾನು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿಯೇ ಹಾದುಹೋಗುತ್ತದೆ. ಹಾಗಾಗಿ ಮೋದಿಯವರಿಗೆ ಮತ್ತು ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ವಿಶೇಷವಾಗಿ ಯೋಜನೆಯ ತ್ವರಿತ ಅನುಮೋದನೆಗೆ ಕಾರಣೀಭೂತರಾದ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸದಾನಂದ ಗೌಡ ತಿಳಿಸಿದರು.

ಯೂರಿಯಾ ಸಬ್ಸಿಡಿ ಹಾಗೆಯೇ ನನ್ನ ಇಲಾಖೆಗೆ ಸಂಬಂಧಿಸಿದ ಹೊಸದೊಂದು ಸಬ್ಸಿಡಿ ನೀತಿಗೆ ಒಪ್ಪಿಗೆ ದೊರೆತಿದೆ. ಕಲ್ಲಿದ್ದಲು ಅನಿಲೀಕರಣದ ಮೂಲಕ ತಾಲ್ಚೇರ್ ಫರ್ಟಿಲೈಸರ್ಸ್ ಲಿಮಿಟೆಡ್ (ಟಿಎಫ್ಎಲ್) ಕಾರ್ಖಾನೆಯು ಉತ್ಪಾದಿಸುವ ಯೂರಿಯಾಕ್ಕೆ ವಿಶೇಷ ಸಬ್ಸಿಡಿ ಒದಗಿಸುವ ನೀತಿಗೆ ಸಂಪುಟದ ಆರ್ಥಿಕ ವ್ಯವಹಾರ ಸಮಿತಿಯು ಅನುಮೋದಿಸಿದೆ. ಇದರಿಂದ ಸ್ವದೇಶಿ ರಸಗೊಬ್ಬರ ಉದ್ಯಮದ ನವೀಕರನ ಕಾಮಗಾರಿಗಳಿಗೆ ವಿಶೇಷವಾಗಿ ಪರಿಸರ ಸ್ನೇಹಿ ಹಸಿರು ತಂತ್ರಜ್ಞಾನ ಅಳವಡಿಕೆಗೆ ಉತ್ತೇಜನ ದೊರೆಯಲಿದೆ. ಹಾಗೆಯೇ ಕೈಗಾರಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ ಕಡಿಮೆ ಮಾಡುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸದಾನಂದ ಗೌಡ ಹೇಳಿದರು.

ಕಲ್ಲಿದ್ದಲು ಅನಿಲೀಕರಣ ಆಧಾರಿತ ಟಿಎಫ್ಎಲ್ ಯೂರಿಯಾ ಸ್ಥಾವರವು ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸ್ಥಾಪಿತ ಸಾಮರ್ಥ್ಯ ಹೊಂದಿದ್ದು ಯೋಜನೆಯ ಅಂದಾಜು ವೆಚ್ಚ 13277.21 ಕೋಟಿ ರೂಪಾಯಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...