ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಮನೆ ಒಂದಕ್ಕೆ 7.71 ಲಕ್ಷ ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ಮೀಟರ್ ರೀಡರ್ ಯಡವಟ್ಟಿನಿಂದಾಗಿ 2 -3 ಸಾವಿರ ರೂ. ಲೆಕ್ಕದಲ್ಲಿ ಬರುತ್ತಿದ್ದ ವಿದ್ಯುತ್ ಬಿಲ್ 7,71,072 ರೂಪಾಯಿ ಬಂದಿದೆ.
ಬಿಲ್ ನೀಡಲು ಬಂದ ಮೀಟರ್ ರೀಡರ್ ಗೆ 7.71 ಲಕ್ಷ ರೂ. ನೀಡಿದ ಬಗ್ಗೆ ಪ್ರಶ್ನಿಸಿದಾಗ, ಇದೆಲ್ಲ ಗೊತ್ತಿಲ್ಲ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. 99,338 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ಬಿಲ್ ನಲ್ಲಿ ತೋರಿಸಲಾಗಿದೆ.
ಉಳ್ಳಾಲ ಬೈಲ್ ನಿವಾಸಿಯಾಗಿರುವ ಸದಾಶಿವ ಆಚಾರ್ಯ ಅವರ ಮನೆಯ ವಿದ್ಯುತ್ ಬಿಲ್ 2 ರಿಂದ 3 ಸಾವಿರ ರೂ.ವರೆಗೆ ಬರುತ್ತಿದ್ದು, ಅವರು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಹೀಗಿದ್ದರೂ 7.71 ಲಕ್ಷ ರೂ. ಬಿಲ್ ಬಂದಿದೆ. ಈ ವಿಷಯ ತಿಳಿದ ಮೆಸ್ಕಾಂ ಅಧಿಕಾರಿಗಳು ಸದಾಶಿವ ಆಚಾರ್ಯ ಅವರ ಮನೆಗೆ ಹೋಗಿ ಪರಿಷ್ಕೃತ 2833 ರೂ. ಬಿಲ್ ನೀಡಿದ್ದಾರೆ.