ಇತ್ತೀಚಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕಡಿತ ವರದಿಗಳು ಹೆಚ್ಚುತ್ತಿರುವ ಬೆನ್ನಲ್ಲೇ ಫೇಸ್ ಬುಕ್, ವಾಟ್ಸಪ್ ಮಾತೃಸಂಸ್ಥೆ ಮೆಟಾ ಕೂಡ ಮತ್ತೊಂದು ಹಂತದಲ್ಲಿ ಉದ್ಯೋಗ ಕಡಿತ ಮಾಡಲಿದೆ.
ವೋಕ್ಸ್ ಪಡೆದ ವಿವರಗಳ ಪ್ರಕಾರ ಮೆಟಾ ಕಂಪನಿಯ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್, ಕಂಪನಿಯಾದ್ಯಂತದ ನಡೆಸಿದ ಸಭೆಯಲ್ಲಿ ಈಗಾಗಲೇ ಉದ್ಯೋಗಿಗಳು ಮತ್ತು ಇತರರಿಗೆ ಈ ಬಗ್ಗೆ ತಿಳಿಸಿರುವುದರಿಂದ ಮೇ ಅಂತ್ಯದ ವೇಳೆಗೆ 6 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದೆಂದು ತಿಳಿದುಬಂದಿದೆ.
ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಂದಿನ ಸುತ್ತಿನ ವಜಾಗಳನ್ನು ಮೇ 2023 ರಲ್ಲಿ ನಡೆಸಲಾಗುವುದು ಎಂದು ಇತ್ತೀಚೆಗಷ್ಟೇ ಘೋಷಿಸಿದ್ದರು. ಇದೀಗ ಅಧಿಕೃತ ಪ್ರಕಟಣೆಯ ಮೊದಲು ಉದ್ಯೋಗಿಗಳ ಕಡಿತ ವರದಿ ಹೊರಬಿದ್ದಿದೆ.
ಮುಂದಿನ ವಾರದಿಂದ 6,000 ಉದ್ಯೋಗಿಗಳನ್ನು ಮೆಟಾದಿಂದ ವಜಾಗೊಳಿಸಲಾಗುವುದು ಎಂದು ಉಲ್ಲೇಖಿಸಿದ ಖಚಿತ ಮೂಲವು ವರದಿ ಮಾಡಿದೆ. ಕಂಪನಿಯು ನವೆಂಬರ್‌ನಲ್ಲಿ 11,000 ಕಾರ್ಮಿಕರನ್ನು ವಜಾಗೊಳಿಸಿತು ಮತ್ತು ಮಾರ್ಚ್ 2023 ರಲ್ಲಿ 10,000 ಉದ್ಯೋಗ ಕಡಿತಗಳನ್ನು ಘೋಷಿಸಿತು. ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ, 4,000 ಉದ್ಯೋಗಿಗಳನ್ನು ತೆಗೆದುಹಾಕಿದೆ. ಇದೀಗ ಮತ್ತೆ 6,000 ಜನರು ಕಂಪನಿಯಿಂದ ಹೊರಹೋಗುವ ಪಟ್ಟಿಯಲ್ಲಿದ್ದಾರೆ.
“ಮುಂದಿನ ವಾರ ಮೂರನೇ ತರಂಗ ಸಂಭವಿಸಲಿದೆ. ಇದು ದೊಡ್ಡ ಆತಂಕ ಮತ್ತು ಅನಿಶ್ಚಿತತೆಯ ಸಮಯ. ನಾನು ಸಾಂತ್ವನ ಅಥವಾ ಸೌಕರ್ಯವನ್ನು ಒದಗಿಸುವ ಕೆಲವು ಸುಲಭ ಮಾರ್ಗವನ್ನು ಹೊಂದಲು ಬಯಸುತ್ತೇನೆ. ಇದು ಅನಿಶ್ಚಿತವಾಗಿದೆ” ಎಂದು ಮೆಟ್ ಅಧ್ಯಕ್ಷ ನಿಕ್ ಕ್ಲೆಗ್ ಹೇಳಿದ್ದಾರೆ.
ಈಗಾಗಲೇ ಉದ್ಯೋಗಿಗಳನ್ನು ಮನೆಗೆ ಕಳಿಸುವ ಪ್ರಕ್ರಿಯೆ ಶುರುವಾಗಿದ್ದು ಮೆಟಾದಲ್ಲಿನ ಹಿರಿಯರು ಶೀಘ್ರದಲ್ಲೇ ಉದ್ಯೋಗಿಗಳಿಗೆ ಈ ಬಗ್ಗೆ ಮೇಲ್ ಕಳಿಸಲಿದ್ದಾರೆ.