
ಆತ್ಮಹತ್ಯೆಗೆ ಯತ್ನಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ 22 ವರ್ಷದ ಯುವತಿ ಪ್ರಾಣ ಉಳಿಸಲು ನೆರವಾದ ಮೆಟಾ ಎಐಗೆ ಉತ್ತರಪ್ರದೇಶ ಪೊಲೀಸರು ಧನ್ಯವಾದ ಹೇಳಿದ್ದಾರೆ.
ಮೆಟಾ ಎಐ ಜೊತೆಗಿನ ಸಹಯೋಗದ ಸುಮಾರು ಒಂದೂವರೆ ವರ್ಷಗಳಲ್ಲಿ, ಯುಪಿ ಪೊಲೀಸರು 460 ಕ್ಕೂ ಹೆಚ್ಚು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಗೋಹಾ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ನೋದ ಸುಲ್ತಾನ್ಪುರ ರಸ್ತೆಯಲ್ಲಿರುವ ಸಣ್ಣ ಹಳ್ಳಿಯಿಂದ ಬಂದ 22 ವರ್ಷದ ಯುವತಿ ಶನಿವಾರ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಮಧ್ಯಾಹ್ನ 12:11 ಕ್ಕೆ ಪ್ರಕಟಿಸಿದ ಪೋಸ್ಟ್ ನಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು.
ತಮ್ಮ ಪೋಸ್ಟ್ ನಲ್ಲಿ ಯುವತಿ ಕುರ್ಚಿಯ ಮೇಲೆ ನಿಂತಿರುವ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾಳೆ, ಸೀಲಿಂಗ್ ಫ್ಯಾನ್ನಿಂದ ಕುತ್ತಿಗೆಗೆ ಕೆಂಪು ಬಣ್ಣದ ದುಪಟ್ಟಾವನ್ನು ಕಟ್ಟಿಕೊಂಡು ಆತ್ಮಹತ್ಯೆಗೆ ತಯಾರಿ ನಡೆಸಿದ್ದಾಳೆ.
ವೀಡಿಯೊವನ್ನು ಹಂಚಿಕೊಂಡ ನಂತರ ಕೆಲವೇ ಕ್ಷಣಗಳಲ್ಲಿ ಮೆಟಾ AI ನಿಂದ ಎಚ್ಚರಿಕೆ ಗಂಟೆ ಸ್ವೀಕರಿಸಿದ ಉತ್ತರಪ್ರದೇಶ ಪೊಲೀಸರು ಎಚ್ಚರಿಕೆಯನ್ನು ಆಯಾ ಪೊಲೀಸ್ ಠಾಣೆಗೆ ರವಾನಿಸಿದರು. ಆತ್ಮಹತ್ಯೆ ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ನಿಗೋಹಾ ಪೊಲೀಸ್ ಠಾಣೆಯ ಪೊಲೀಸ್ ತಂಡವು ಕಾರ್ಯಪ್ರವೃತ್ತವಾಯಿತು ಮತ್ತು ಎಚ್ಚರಿಕೆಯಲ್ಲಿ ನಮೂದಿಸಲಾದ ವಿಳಾಸಕ್ಕೆ ಧಾವಿಸಿತು.
ನೀಡಿದ ವಿಳಾಸವನ್ನು ತಲುಪಲು ಠಾಣೆ ಉಸ್ತುವಾರಿ ಅನುಜ್ ತಿವಾರಿ ನೇತೃತ್ವದ ತಂಡವು ಸುಮಾರು 4 ನಿಮಿಷಗಳನ್ನು ತೆಗೆದುಕೊಂಡಿತು. ತಂಡವು ಮಧ್ಯಾಹ್ನ 12.15 ಕ್ಕೆ ಯುವತಿಯ ಮನೆಯ ಹೊರಗೆ ತಲುಪಿತು ಮತ್ತು ತಕ್ಷಣ ಅವರ ಮನೆಯೊಳಗೆ ಧಾವಿಸಿ ಅವಳನ್ನು ರಕ್ಷಿಸಿತು ಎಂದು ಮೋಹನ್ಲಾಲ್ಗಂಜ್ನ ಸಹಾಯಕ ಪೊಲೀಸ್ ಕಮಿಷನರ್ (ACP) ರಜನೀಶ್ ವರ್ಮಾ ಹೇಳಿದರು. ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದರು.
ವಿಚಾರಣೆ ವೇಳೆ ಯುವತಿ ತಾನು ಆರ್ಯಸಮಾಜದ ದೇವಸ್ಥಾನವೊಂದರಲ್ಲಿ ಅಮನ್ ಎಂಬಾತನ ಜತೆ ಪ್ರೇಮ ವಿವಾಹವಾಗಿರುವುದಾಗಿ ಬಹಿರಂಗಪಡಿಸಿದ್ದಾಳೆ. ನಾಲ್ಕು ತಿಂಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ಅವನು ತನ್ನನ್ನು ಸ್ವೀಕರಿಸಲು ನಿರಾಕರಿಸಿದ. ಇದರಿಂದಾಗಿ ಇಬ್ಬರು ಬೇರೆಯಾಗಬೇಕಾದ ಪರಿಸ್ಥಿತಿ ಎದುರಾದಾಗ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ.
ಆತ್ಮಹತ್ಯೆಗೆ ಪ್ರಚೋದನೆಗಾಗಿ ಅಮನ್ ವಿರುದ್ಧ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವೀಡಿಯೊವನ್ನು ಮಹಿಳೆಯ ಸಾಮಾಜಿಕ ಮಾಧ್ಯಮ ಪುಟದಿಂದ ತೆಗೆದುಹಾಕಲಾಗಿದೆ.
ಆದಾಗ್ಯೂ ಮೆಟಾ AI ಜೀವ ಸಂರಕ್ಷಕನಾಗಿ ಹೊರಹೊಮ್ಮಿದ್ದು ಇದೇ ಮೊದಲಲ್ಲ. ಜನವರಿ 2023 ರಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ AI ಅನ್ನು ಬಳಸಿಕೊಳ್ಳಲು ಉತ್ತರಪ್ರದೇಶ ಪೊಲೀಸರು ಫೇಸ್ಬುಕ್ ಮತ್ತು ಇನ್ಸ್ಟಾ ಗ್ರಾಂನ ಮೂಲ ಕಂಪನಿಯಾದ ಮೆಟಾದೊಂದಿಗೆ ಸಹಕರಿಸಿದರು. ಜನವರಿ 2023 ರಿಂದ ಆಗಸ್ಟ್ 2024 ರವರೆಗೆ ಈ ಪ್ಲಾಟ್ಫಾರ್ಮ್ಗಳಲ್ಲಿ ಆತ್ಮಹತ್ಯೆ-ಉದ್ದೇಶದ ಪೋಸ್ಟ್ ಗಳನ್ನು ಪತ್ತೆಹಚ್ಚುವ ಮೂಲಕ 460 ಕ್ಕೂ ಹೆಚ್ಚು ಜೀವಗಳನ್ನು ಉಳಿಸುವಲ್ಲಿ ಮೆಟಾದ AI ಪ್ರಮುಖ ಪಾತ್ರ ವಹಿಸಿದೆ.
ಅಂತಹ ಪೋಸ್ಟ್ ಕಾಣಿಸಿಕೊಂಡಾಗ ಮೆಟಾದ AI ತಕ್ಷಣವೇ DGP ಹೆಡ್ಕ್ವಾರ್ಟರ್ಸ್ ನಲ್ಲಿರುವ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಎಚ್ಚರಿಸುತ್ತದೆ. ಈ ಕೇಂದ್ರವು 24/7 ಕಾರ್ಯನಿರ್ವಹಿಸುತ್ತದೆ. ಮೆಟಾದ AI ಎಚ್ಚರಿಕೆಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತದೆ, ಬಳಕೆದಾರರ ಸ್ಥಳ ಮತ್ತು ಇತರ ಸಂಬಂಧಿತ ವಿವರಗಳನ್ನು ನಿರ್ಧರಿಸುತ್ತದೆ. ಇವುಗಳನ್ನು ನಂತರ ಆಯಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗುತ್ತದೆ. ಬಳಿಕ ತ್ವರಿತ ಜೀವ ಉಳಿಸುವ ಕ್ರಮವನ್ನು ಸಕ್ರಿಯಗೊಳಿಸುತ್ತದೆ.