ನವದೆಹಲಿಯ ಪ್ರತಿಷ್ಟಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತೊಮ್ಮೆ ಸುದ್ದಿಯಲ್ಲಿದೆ. ಭಾನುವಾರದಂದು ವಿವಿಯ ಕ್ಯಾಂಪಸ್ ಆವರಣದಲ್ಲಿಯೇ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಷ್ಟಕ್ಕೂ ಈ ಗಲಾಟೆಗೆ ಕಾರಣವಾಗಿದ್ದು, ವೆಜ್ – ನಾನ್ ವೆಜ್ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಎಂದು ಹೇಳಲಾಗಿದೆ. ಭಾನುವಾರವಾದ ಕಾರಣ ಜೆ ಎನ್ ಯು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ನಾನ್ ವೆಜ್ ಆಹಾರ ಸಿದ್ದಪಡಿಸಿದ್ದು, ಇದಕ್ಕೆ ಬಲಪಂಥೀಯ ಸಂಘಟನೆ ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಭಾನುವಾರ ರಾಮನವಮಿ ಇದ್ದ ಕಾರಣ ಮಾಂಸಾಹಾರ ತಯಾರಿಸಬಾರದು ಎಂದು ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಹಾಸ್ಟೆಲ್ ಕಾರ್ಯದರ್ಶಿಗೆ ಒತ್ತಾಯಿಸಿದರೆನ್ನಲಾಗಿದ್ದು, ಇದಕ್ಕೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ವಿರೋಧಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಬಳಿಕ ಮಾರಾಮಾರಿಗೆ ತಿರುಗಿದೆ ಎನ್ನಲಾಗಿದೆ.
ಆದರೆ ಎಬಿವಿಪಿ ಇದನ್ನು ನಿರಾಕರಿಸಿದ್ದು, ಕಾವೇರಿ ಹಾಸ್ಟೆಲ್ ನಲ್ಲಿ ರಾಮನವಮಿ ಆಚರಣೆಗೆ ಸಿದ್ದತೆ ನಡೆಸಿದ್ದ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿ ಗಲಾಟೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.