ದೂದ್ ಸಾಗರ ಜಲಪಾತವು ಭಾರತದ ಅತ್ಯಂತ ರಮಣೀಯ ಜಲಪಾತಗಳಲ್ಲಿ ಒಂದಾಗಿದೆ. ಗೋವಾದ ಸೋನೌಲಿಮ್‌ನಲ್ಲಿರುವ ಈ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಂತೂ ವರ್ಣಿಸಲಸಾಧ್ಯ. ಇದೀಗ ಈ ಜಲಪಾತದ ಸುಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಟ್ವಿಟ್ಟರ್ ಬಳಕೆದಾರರು ಭವ್ಯವಾದ ಜಲಪಾತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಪರ್ವತದ ಕಡಿದಾದ ಮುಖವನ್ನು ಮುಸುಕು ಹಾಕಿ 310 ಮೀಟರ್ ಎತ್ತರದಿಂದ ಹಾಲ್ನೆರೆಯಂತೆ ಧುಮ್ಮಿಕ್ಕುತ್ತಿರುವ ಅದ್ಭುತ ದೃಶ್ಯಾವಳಿ ಕಂಡುಬಂದಿದೆ. ಜಲರಾಶಿಯ ಸೌಂದರ್ಯದ ಮಧ್ಯೆ ರೈಲು ಆಗಮಿಸುತ್ತಿರುವ ದೃಶ್ಯಾವಳಿ ಮತ್ತಷ್ಟು ಸುಂದರವನ್ನಾಗಿಸಿದೆ. ಎಷ್ಟೆಂದರೂ ಪ್ರಕೃತಿಯ ಸೊಬಗನ್ನು ವರ್ಣಿಸಲು ಪದಗಳು ಸಾಲದು.
ಸ್ವರ್ಗಲೋಕವೇ ಧರೆಗಿಳಿದಂತೆ ಭಾಸವಾಗುವ ಈ ಮನಮೋಹಕ ದೃಶ್ಯದ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಪ್ರಯಾಣಗಳು ಕನಸಿನಂತೆ ! ದೂದ್ ಸಾಗರ್ ಜಲಪಾತ ಬಹಳ ಅದ್ಭುತ ತಾಣ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸುಮಾರು ಸುಮಾರು 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ಆಹಾಹಾ…… ಅಂತಾ ಉದ್ಘರಿಸಿದವರೇ ಹೆಚ್ಚು. ಪ್ರಕೃತಿಯ ಸೌಂದರ್ಯಕ್ಕಿಂತ ಬೇರೆ ಯಾವ ಸೌಂದರ್ಯವೂ ಮೋಡಿ ಮಾಡಲಾರದು.
ಅಂದಹಾಗೆ, ಗೋವಾದಿಂದ ಕರ್ನಾಟಕದ ಬೆಳಗಾವಿಗೆ ಸಾಗುವ ಮಾರ್ಗದಲ್ಲಿ ಪ್ರಕೃತಿಯ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಮಾಂಡೋವಿ ನದಿಯಿಂದ ಹುಟ್ಟುವ ಈ ಜಲಪಾತ ಬಹಳ ಪ್ರಸಿದ್ಧಿ ಪಡೆದಿದೆ. ಚೇತನ್ ಅಭಿನಯದ ಸ್ಯಾಂಡಲ್ ವುಡ್ ನ ʼಮೈನಾʼ, ಬಾಲಿವುಡ್ ನ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಚೆನ್ನೈ ಎಕ್ಸ್‌ಪ್ರೆಸ್ ಚಲನಚಿತ್ರದಲ್ಲಿ ಕೂಡ ಶೂಟಿಂಗ್ ಗೆ ಬಳಸಿಕೊಳ್ಳಲಾಗಿತ್ತು.
ಗೋವಾ ಪ್ರವಾಸೋದ್ಯಮ ಇಲಾಖೆಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಲಪಾತದ ಸುತ್ತಮುತ್ತಲಿನ ಪ್ರದೇಶವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದೆ. ಜಲಪಾತವು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದಲ್ಲಿ ಭೇಟಿ ನೀಡಿದ್ರೆ ಮಾತ್ರ ಇಲ್ಲಿನ ಜಲರಾಶಿ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತದೆ.