ಬೆಳಗಾವಿ: ವಿಧಾನಮಂಡಲ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಬೆಳಗಾವಿಯಲ್ಲಿ ಆಯೋಜಿಸಿದ್ದ ಮಹಾಮೇಳಾವ್ ಸಮಾವೇಶಕ್ಕೆ ತಡೆಯೊಡ್ಡಲಾಗಿದೆ.
ಬೆಳಗಾವಿಯ ಟಿಳಕವಾಡಿ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಇಂದು ಮಹಾಮೇಳಾವ್ ಸಮಾವೇಶ ಆಯೋಜಿಸಿತ್ತು. ಸಮಾವೇಶಕ್ಕಾಗಿ ಬೃಹತ್ ವೇದಿಕೆಯನ್ನು ಸಿದ್ಧಮಾಡಿತ್ತು. ಇದೀಗ ಮಹಾಮೇಳಾವ್ ಗೆ ಅನುಮತಿ ಇಲ್ಲದ ಕಾರಣಕ್ಕೆ ಬೆಳಗಾವಿ ಪೊಲಿಸರು ಕೊನೇಕ್ಷಣದಲ್ಲಿ ಮಹಾಮೇಳಾವ್ ಗೆ ತಡೆ ನೀಡಿದ್ದಾರೆ.
ಅಲ್ಲದೇ ವ್ಯಾಕ್ಸಿನ್ ಡಿಪೋ ಮುಂಭಾಗದಲ್ಲಿ ರಾತ್ರೋರಾತ್ರಿ ನಿರ್ಮಿಸಲಾಗಿದ್ದ ವೇದಿಕೆಯನ್ನೂ ತೆರವುಗೊಳಿಸಿದ್ದು, ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಮೂಲಕ ಎಂಇಎಸ್ ಪುಂಡಾಟಕ್ಕೆ ಅಧಿವೇಶನದ ದಿನವೇ ಬ್ರೇಕ್ ಬಿದ್ದಿದೆ.
ವ್ಯಾಕ್ಸಿನ್ ಡಿಪೋ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಯಾರೊಬ್ಬರೂ ಸುಳಿಯಲು ಅವಕಾಶವಿಲ್ಲ. ನಿಷೇಧಾಜ್ಞೆ ಜಾರಿ ಇರುವುದರಿಂದ ಯಾವುದೇ ಪ್ರತಿಭಟನೆಗೂ ಅವಕಾಶವಿಲ್ಲ ಎಂದು ಬೆಳಗಾವಿ ಪೊಲಿಸರು ತಿಳಿಸಿದ್ದಾರೆ. ಈ ಮೂಲಕ 2006ರಿಂದ ಈವರೆಗೆ ಎಂಇಎಸ್ ನಡೆಸುತ್ತಾ ಬಂದಿದ್ದ ಮಹಾಮೇಳಾವ್ ಗೆ ಇದೇ ಮೊದಲಬಾರಿಗೆ ತಡೆಯೊಡ್ಡಲಾಗಿದೆ.