ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಬೆಳಗಾವಿಯಾದ್ಯಂತ ಮಧ್ಯ ರಾತ್ರಿಯಿಂದ ಕನ್ನಡ ರಾಜ್ಯೋತ್ಸವವನ್ನು ಕನ್ನಡಪರ ಸಂಘಟನೆಗಳು, ಜಿಲ್ಲೆಯ ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದರೆ ಮತ್ತೊಂದೆಡೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಕರಾಳದಿನ ಆಚರಣೆ ನಡೆಸುತ್ತಿದ್ದಾರೆ.
ಬೆಳಗಾವಿಯ ಸಂಭಾಜಿ ಮೈದಾನದಿಂದ ಕರಾಳ ದಿನಾಚರಣೆ ಮೆರವಣಿಗೆಗೆ ಚಾಲನೆ ನೀಡಿರುವ ಎಂಇಎಸ್ ಮುಖಂಡರು ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ ಸೇರಿದಂತೆ ಗಡಿಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ.
ಕಪ್ಪುಪಟ್ಟಿ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಎಂಇಎಸ್ ನ ಹಲವರು ಗಡಿ ತಾಲೂಕುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ. ಮೆರವಣಿಗೆಯುದ್ಧಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.