ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡಾಟ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣಗಳ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ರಾಜಕೀಯ ದುರ್ಲಾಭ ಪಡೆಯಲು ಇಂತಹ ಕೃತ್ಯವೆಸಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಅದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಎಂಇಎಸ್ ನ್ನು ಸಮರ್ಥಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಡೈರೆಕ್ಟರ್ ಆಂಡ್ ಪ್ರೊಡ್ಯೂಸರ್ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.
ಹತಾಶ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ ದೇಶದಲ್ಲಿ ಸಂಘರ್ಷ ಸೃಷ್ಟಿಸಿ ಧ್ವೇಷದ ಮನೋಭಾವ ಹಬ್ಬಿಸಿ ರಾಜಕೀಯ ದುರ್ಲಾಭ ಪಡೆಯಲು ಇಂತಹ ಕೃತ್ಯ ನಡೆಸುತ್ತಿದೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣದ ಹಿಂದೆಯೂ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಡಿಕೆಶಿ ಹಾಗೂ ಜಮೀರ್ ಅಹ್ಮದ್ ಅವರ ಖಟ್ಟರ್ ಬೆಂಬಲಿಗರು ನಡೆಸಿರುವ ಕೃತ್ಯ. ಜಾತಿ, ಭಾಷಾ ಸಂಘರ್ಷ ಹುಟ್ಟುಹಾಕಿ ಷಡ್ಯಂತ್ರ ನಡೆಸುವುದೇ ಇವರ ಉದ್ದೇಶ ಎಂದು ವಾಕ್ಸಮರ ನಡೆಸಿದ್ದಾರೆ.
ಗಲಭೆ ಪ್ರಕರಣಗಳ ಹಿಂದಿನ ಕೈವಾಡದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಘಟನೆಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.