ತನ್ನ ಮರ್ಸಿಡಿಸ್ ಕಾರಿನ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವು ಖುದ್ದು ಕಾರಿನ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡುಕೊಂಡ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ.
ಬ್ರಿಟನ್‌ನ ಲೀಸೆಸ್ಟರ್‌ನ ನೈಟನ್ ಪ್ರದೇಶದಲ್ಲಿ ವಾಸಿಸುತ್ತಿರುವ 63 ವರ್ಷದ ರಂಜಿತ್ ಸಿಂಗ್ ಅವರು ನಾಲ್ಕು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಬೆಂಜ಼್ ಹೈಬ್ರಿಡ್ ಕಾರನ್ನು ಖರೀದಿಸಿದ್ದರು.
ಸವಿಯಲು ಬಲು ರುಚಿಕರ ‘ಸಮೋಸಾ’
ಆದರೆ, ಇತ್ತೀಚೆಗಷ್ಟೇ ಎಂಟು ವರ್ಷ ಹಳೆಯ ಕಾರಿನ ಬ್ಯಾಟರಿ ವೈಫಲ್ಯವಾದ ಕಾರಣ ಅದನ್ನು ಬದಲಿಸಲು ಕಾರಿನ ಪ್ರಸ್ತುತ ಮೌಲ್ಯಕ್ಕಿಂತ £15,000 (ರೂ. 15 ಲಕ್ಷ) ಹೆಚ್ಚು ವೆಚ್ಚವಾಗುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಇದಲ್ಲದೇ, ಬ್ಯಾಟರಿ ಬದಲಿಸಲು ಒಂದು ಗಂಟೆಗೆ ಸುಮಾರು £200 ಹೆಚ್ಚುವರಿ ಕಾರ್ಮಿಕ ವೆಚ್ಚವಿರುತ್ತದೆ.
ರಂಜಿತ್ ಅವರು ಮರ್ಸಿಡಿಸ್ ಡೀಲರ್‌ಶಿಪ್‌ನಲ್ಲಿ £27,000 (27 ಲಕ್ಷ ರೂ.) ಗೆ ವಾಹನವನ್ನು ಖರೀದಿಸಿದ್ದರು. ಆ ಸಮಯದಲ್ಲಿ, ಕಾರು 49,000 ಮೈಲುಗಳಷ್ಟು ಓಡಿತ್ತು ಮತ್ತು ಉತ್ತಮ ಸ್ಥಿತಿಯಲ್ಲಿತ್ತು. ಈ ವರ್ಷ, ಅದರ ಬ್ಯಾಟರಿ ಎಂಟು ವರ್ಷಗಳ ನಂತರ ತನ್ನ ಜೀವಿತಾವಧಿಯನ್ನು ಕೊನೆಗೊಳಿಸಿತು.
ಲೀಸೆಸ್ಟರ್‌ಶೈರ್ ಲೈವ್‌ಗೆ ರಂಜಿತ್ ತಮ್ಮ ನೋವು ಹೇಳಿಕೊಂಡಿದ್ದು, “ನಾನು ಯಾವಾಗಲೂ ಮರ್ಸಿಡಿಸ್ ಗ್ರಾಹಕರಾಗಿದ್ದೇನೆ ಮತ್ತು ಅವರು ಉತ್ಪಾದಿಸುವ ಕಾರುಗಳನ್ನು ಪ್ರೀತಿಸುತ್ತಿದ್ದೆ. ಅದರ ವಿಶ್ವಾಸಾರ್ಹತೆಗಾಗಿ ನಾವು ಕಾರನ್ನು ಖರೀದಿಸಿದ್ದೇವೆ. ಈ ಘಟನೆಯಿಂದ ನಾನು ಗಾಬರಿಗೊಂಡಿದ್ದೇನೆ. ನನಗೆ ಈಗ ಕೇವಲ ಎರಡು ಆಯ್ಕೆಗಳಿವೆ – ಎಂಟು ವರ್ಷ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವುದು, ಅಥವಾ ಅದರ ಮೌಲ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು. ನಾವು ಆಟೋ ಟ್ರೇಡರ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಕಾರಿನ ಮೌಲ್ಯವು ಈಗ ಕೇವಲ £12,850 (ರೂ. 12.9 ಲಕ್ಷ) ಇದೆ ಎಂದು ಆತ ಹೇಳುತ್ತಿದ್ದಾನೆ” ಎಂದಿದ್ದಾರೆ.
ಸಿಂಗ್ ಅವರ ಪುತ್ರಿ ರಮ್ನಿಕ್ ಕೌರ್ ಮಾತನಾಡಿ, “ಇದರಿಂದಾಗಿ ಅಪ್ಪ ತುಂಬಾ ನಿರಾಶೆಗೊಂಡಿದ್ದಾರೆ, ಒತ್ತಡದಲ್ಲಿದ್ದಾರೆ ಮತ್ತು ಕಾರನ್ನು ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತಿಲ್ಲ. ನಿವೃತ್ತ ವ್ಯಕ್ತಿಯಾಗಿ, ಅವರ ಬಳಿ ಅಷ್ಟು ಹಣವಿಲ್ಲ. ಯಾವುದೇ ವ್ಯಕ್ತಿಯು £27,000 ಬೆಲೆಯ ಕಾರು ಎಂಟು ವರ್ಷಗಳ ನಂತರ ವೈಫಲ್ಯವಾಗುವ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುವುದಿಲ್ಲ,” ಎನ್ನುತ್ತಾರೆ.
ಮರ್ಸಿಡಿಸ್ ಬೆಂಜ಼್ ವಕ್ತಾರರು ಈ ಬಗ್ಗೆ ಮಾತನಾಡಿ, ಎಲ್ಲ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಖರೀದಿಸಿದ ನಂತರ ಗ್ರಾಹಕರಿಗೆ ಬ್ಯಾಟರಿ ಪ್ರಮಾಣ ಪತ್ರದ ಬಗ್ಗೆ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. “ಯಾವುದೇ ಹಿನ್ನೆಲೆ ಮಾಹಿತಿಯಿಲ್ಲದೆ, ಈ ನಿರ್ದಿಷ್ಟ ಸಂದರ್ಭದಲ್ಲಿ ಹೆಚ್ಚಿನ ವೋಲ್ಟೇಜ್ ಬ್ಯಾಟರಿಗೆ ಏಕೆ ಬದಲಿ ಅಗತ್ಯವಿದೆ ಎಂಬುದರ ಕುರಿತು ನಮಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ,” ಎನ್ನುತ್ತಾರೆ ವಕ್ತಾರರು.