
ಬಹುತೇಕ ಎಲ್ಲಾ ಮಹಿಳೆಯರಿಗೆ ಮುಟ್ಟಿನ ನೋವು ಯಮ ಯಾತನೆಯಂತಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಆ ಸಮಯದಲ್ಲಿ ಏರುಪೇರಾಗಿರುತ್ತದೆ. ಮುಟ್ಟಿನ ಸಮಯದಲ್ಲಿ 5 ದಿನಗಳ ಕಾಲ ಮಹಿಳೆಯರು ಹೊಟ್ಟೆನೋವು, ಬೆನ್ನು ನೋವು, ಸೆಳೆತ ಹೀಗೆ ಅನೇಕ ಸಮಸ್ಯೆಗಳಿಂದ ಬಳಲುತ್ತಾರೆ.
ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಮಹಿಳೆಯರಿಗೆ ಮುಟ್ಟಿನ ನೋವು ಹೆಚ್ಚಾಗಿರುತ್ತದೆ. ಪ್ರತಿ 10 ಮಹಿಳೆಯರಲ್ಲಿ 6 ಮಹಿಳೆಯರು ಚಳಿಗಾಲದಲ್ಲಿ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಾರೆ ಎಂಬುದು ಅನೇಕ ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಮಹಿಳೆಯರ ಋತುಚಕ್ರದ ನೋವು ಚಳಿಗಾಲದಲ್ಲಿ ಹೆಚ್ಚಾಗುವುದೇಕೆ ಎನ್ನುವುದು ಅನೇಕರ ಪ್ರಶ್ನೆ. ಇದಕ್ಕೆ ಅನೇಕ ಕಾರಣಗಳಿವೆ.
ವಿಟಮಿನ್ ಡಿ ಕೊರತೆ – ಶೀತ ವಾತಾವರಣದಲ್ಲಿ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಕಾರಣ ಸೂರ್ಯನ ಬಿಸಿಲು ಅನೇಕ ಕಡೆಗಳಲ್ಲಿ ಲಭ್ಯವಾಗುವುದೇ ಇಲ್ಲ. ಈ ಕಾರಣದಿಂದಲೇ ಚಳಿಗಾಲದಲ್ಲಿ ಮಹಿಳೆಯರಲ್ಲಿ ಮುಟ್ಟಿನ ನೋವು ವಿಪರೀತವಾಗಿರುತ್ತದೆ.
ದೇಹದಲ್ಲಿ ನೀರಿನ ಕೊರತೆ – ಜನರು ಬೇಸಿಗೆಗಿಂತ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುತ್ತಾರೆ. ಇದರಿಂದ ದೇಹ ಡಿಹೈಡ್ರೇಟ್ ಆಗಬಹುದು. ಈ ಕಾರಣಕ್ಕೆ ಕೂಡ ಋತುಚಕ್ರದ ವೇಳೆ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಹೆಚ್ಚು ಜಂಕ್ ಫುಡ್ ಸೇವನೆ – ಜನರು ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಜಂಕ್ ಫುಡ್, ಎಣ್ಣೆಯುಕ್ತ ಮತ್ತು ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾರೆ. ಇದರಿಂದಾಗಿ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದು ಕೂಡ ಮುಟ್ಟಿನ ನೋವು ಮತ್ತು ಸೆಳೆತವನ್ನು ಹೆಚ್ಚಿಸಬಹುದು.
ಮುಟ್ಟಿನ ಸಮಯದಲ್ಲಿ ಅಸಹನೀಯ ನೋವನ್ನು ಕಡಿಮೆ ಮಾಡಲು ಬಯಸಿದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ಕಷಾಯ ಕುಡಿಯಬಹುದು. ಅಥವಾ ಒಂದು ಚೂರು ದಾಲ್ಚಿನ್ನಿಯನ್ನು ಅಗಿದು ತಿನ್ನಬಹುದು. ಇದು ಉಷ್ಣ ಪರಿಣಾಮ ಹೊಂದಿದ್ದು, ದೇಹ ಬೆಚ್ಚಗಾಗಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ ಚಳಿಗಾಲದಲ್ಲಿ ಹೆಚ್ಚಿನ ಜನರು ಚಹಾ ಮತ್ತು ಕಾಫಿಯನ್ನು ಜಾಸ್ತಿ ಕುಡಿಯುತ್ತಾರೆ. ಇದು ಕೂಡ ಮಹಿಳೆಯರ ಮುಟ್ಟಿನ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಮತ್ತು ನೋವನ್ನು ಹೆಚ್ಚಿಸಬಹುದು. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವ ಬದಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ.