ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಸೋಲು ಕಂಡಿದೆ.
ಹಾಲಿ ಚಾಂಪಿಯನ್ ಭಾರತವು 2ನೇ ಸೆಮಿಫೈನಲ್ ಪಂದ್ಯದಲ್ಲಿ 3-5ರ ಸೆಟ್ ಗಳಿಂದ ಸೋಲು ಅನುಭವಿಸಿದೆ. ಈ ಗೆಲುವಿನ ಮೂಲಕ ಜಪಾನ್ ತಂಡವು ರೌಂಡ್ ರಾಬಿನ್ ಸುತ್ತಿನಲ್ಲಿನ ಹೀನಾಯ ಸೋಲಿನ ಸೇಡು ತೀರಿಸಿಕೊಂಡಿದೆ.
ರೌಂಡ್ ರಾಬಿನ್ ಸುತ್ತಿನಲ್ಲಿ ಜಪಾನ್ ವಿರುದ್ಧ ಭಾರತ ತಂಡವು 6-0 ಅಂತರದ ಗೆಲುವು ದಾಖಲಿಸಿತ್ತು. ಸಹಜವಾಗಿ ಸೆಮಿಫೈನಲ್ ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಹೊರ ಹೊಮ್ಮಿದ್ದರೂ ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ.
ಜಪಾನ್ ತಂಡವು ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ತೋರಿತು. ಪರಿಣಾಮವಾಗಿ ಮೊದಲ ಅವಧಿಯ 15 ನಿಮಿಷದಲ್ಲಿಯೇ 3 ಗೋಲು ಗಳಿಸಿ, ಭಾರತಕ್ಕೆ ದೊಡ್ಡ ಆಘಾತ ನೀಡಿತು. ಪಂದ್ಯದ 3 ಹಾಗೂ ನಾಲ್ಕನೇ ಅವಧಿಯಲ್ಲಿ ತಲಾ ಒಂದು ಗೋಲು ಬಾರಿಸುವುದರ ಮೂಲಕ ಫೈನಲ್ ಪ್ರವೇಶಿಸಿತು.
ಇದಕ್ಕೆ ಭಾರತ ತಂಡ ಪ್ರತಿರೋಧ ತೋರಿದರೂ 3 ಗೋಲುಗಳನ್ನು ಮಾತ್ರ ಗಳಿಸುವಲ್ಲಿ ಯಶ ಕಂಡಿತು. ಭಾರತದ ಪರ 17ನೇ ನಿಮಿಷದಲ್ಲಿ ದಿಲ್ ಪ್ರೀತ್ ಸಿಂಗ್, 43ನೇ ನಿಮಿಷದಲ್ಲಿ ಹರ್ಮಾನ್ ಪ್ರೀತ್ ಸಿಂಗ್ ಹಾಗೂ 58ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಗೋಲು ಬಾರಿಸಿದರು.
ಭಾರತ ತಂಡವು ಕಂಚಿನ ಪದಕ್ಕಾಗಿ ಪಾಕ್ ನ್ನು ಎದುರಿಸಬೇಕಿದೆ. ದಕ್ಷಿಣ ಕೋರಿಯಾ ಹಾಗೂ ಜಪಾನ್ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಟ ನಡೆಸಲಿವೆ.