ನೀವು ಪೂರ್ಣಚಂದ್ರ ತೇಜಸ್ವಿ ಅವರ ಪ್ಯಾಪಿಲಾನ್ ಕಾದಂಬರಿಯಲ್ಲಿ, ಸಮುದ್ರದಲ್ಲಿ ಪ್ಯಾಪಿಲಾನ್ ನ ಮೈನವೀರೆಳಿಸುವ ಸಾಹಸಮಯ ಕಥೆಯನ್ನು ಓದಿರುತ್ತೀರಿ. ಹಾಗೆಯೇ ಇಲ್ಲಿಬ್ಬರು ಯುವಕರು 29 ದಿನ ಸಮುದ್ರದಲ್ಲಿ ಕಳೆದಿದ್ದಾರೆ.
29 ದಿನಗಳನ್ನು ಸಾಗರದಲ್ಲಿ ಕಳೆದ ಇಬ್ಬರನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಇದೊಂದು ಉತ್ತಮ ವಿರಾಮವಾಗಿತ್ತು ಅಂತಾ ರಕ್ಷಿಸಲ್ಪಟ್ಟ ವ್ಯಕ್ತಿಗಳು ಹೇಳಿದ್ದಾರೆ.
ಲಿವಾ ನಂಜಿಕಾನಾ ತನ್ನ ಸ್ನೇಹಿತ ಜೂನಿಯರ್ ಕೊಲೊನಿಯೊಂದಿಗೆ ಮೊನೊ ದ್ವೀಪದಿಂದ ಸೆಪ್ಟೆಂಬರ್ 3 ರಂದು ಸಣ್ಣ ಅಶ್ವಶಕ್ತಿಯ ಮೋಟಾರ್ ಬೋಟ್‌ನಲ್ಲಿ ಹೊರಟಿದ್ದರು. ಆದರೆ, ಅವರ ಟ್ರ್ಯಾಕರ್ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಅವರ ಸಣ್ಣ ಸಾಹಸವು ಉಳಿವಿಗಾಗಿ ಯುದ್ಧವಾಗಿ ಬದಲಾಯಿತು.
ಸೊಲೊಮನ್ ದ್ವೀಪಗಳ ನಾವಿಕರಾದ ಇಬ್ಬರು ಸ್ನೇಹಿತರು, ನ್ಯೂ ಜಾರ್ಜಿಯಾ ದ್ವೀಪಕ್ಕೆ ಪ್ರಯಾಣಿಸುವಾಗ ಈ ಸಂಕಷ್ಟ ಎದುರಾಗಿತ್ತು. ಆಹಾರಕ್ಕಾಗಿ ಅವರ ಬಳಿ ಕಿತ್ತಳೆ ಹಣ್ಣು ಮಾತ್ರ ಇತ್ತು.
ಈ ಜೋಡಿ ತಾವು ಈ ಮೊದಲು ಪ್ರವಾಸ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಈ ಬಾರಿ ಭಾರಿ ಮಳೆ ಮತ್ತು ಭಯಂಕರವಾದ ಗಾಳಿ ಬೀಸಿದೆ. ಹೀಗಾಗಿ ಅವರಿದ್ದ ಬೋಟ್ ಗಾಳಿಗೆ ಹಾರಿದೆ, ಹಾಗೆಯೇ ಜಿಪಿಎಸ್ ಟ್ರ್ಯಾಕರ್ ಹಾನಿಗೀಡಾಗಿದೆ. ಇದರ ಪರಿಣಾಮವಾಗಿ, ಅವರು ಮೊನೊ ದ್ವೀಪದಲ್ಲಿ ತಮ್ಮ ಆರಂಭದ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ 29 ದಿನಗಳು ಮತ್ತು 400 ಕಿಲೋಮೀಟರ್ ನೀರಿನಲ್ಲಿ ತೇಲಿದ್ದರಂತೆ.
ಈ ಜೋಡಿ ಕಿತ್ತಳೆ, ಸಮುದ್ರದಿಂದ ಸಂಗ್ರಹಿಸಿದ ತೆಂಗಿನಕಾಯಿ ಮತ್ತು ಮಳೆನೀರನ್ನು ಸಣ್ಣ ಕ್ಯಾನ್ವಾಸ್ ಬಳಸಿ ಸಂಗ್ರಹಿಸಿಟ್ಟುಕೊಂಡಿದೆ. ಅದೃಷ್ಟವಶಾತ್, ಇವರಿಬ್ಬರನ್ನು ಮೀನುಗಾರರು ಗುರುತಿಸಿದ್ದಾರೆ. ಬಳಿಕ ಅಕ್ಟೋಬರ್ 2 ರಂದು ಪೋಮಿಯೊ ಪಟ್ಟಣಕ್ಕೆ ಕರೆದೊಯ್ದಿದ್ದಾರೆ.
29 ದಿನಗಳ ಕಾಲ ಸಾಗರದಲ್ಲಿ ಕಳೆದಿದ್ದರಿಂದ ಈ ಇಬ್ಬರು ನಡೆಯಲು ಅಶಕ್ತರಾಗಿದ್ದರು. ಆದರೆ, ಸಮುದ್ರದಲ್ಲಿ ಅವರು ಎದುರಿಸಿದ ಸವಾಲುಗಳ ಹೊರತಾಗಿಯೂ, ಅವರು ಧನಾತ್ಮಕ ದೃಷ್ಟಿಕೋನದಿಂದ ನಾಗರೀಕತೆಗೆ ಮರಳಿದ್ದಾರೆ.
“ನಾನು ಅಲ್ಲಿರುವಾಗ ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಕೋವಿಡ್ ಅಥವಾ ಇನ್ನಾವುದರ ಬಗ್ಗೆ ಕೇಳಿಲ್ಲ. ನಾನು ಮನೆಗೆ ಮರಳಲು ಎದುರು ನೋಡುತ್ತಿದ್ದೇನೆ. ಆದರೆ ಎಲ್ಲದರಿಂದಲೂ ಇದು ಉತ್ತಮವಾದ ವಿರಾಮವಾಗಿದೆ ಎಂದು ನಾನು ಊಹಿಸುತ್ತೇನೆ” ಎಂದು ನಂಜಿಕಾನ ಹೇಳಿದ್ದಾರೆ.
ಲಿಮಿ ನಂಜಿಕಾನಾ ಮತ್ತು ಜೂನಿಯರ್ ಖೊಲೊನಿಯನ್ನು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಲಾಯಿತು. ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಯಾಣ ನಿರ್ಬಂಧಗಳಿಂದಾಗಿ ಈ ಸ್ನೇಹಿತರಿಗೆ ಸದ್ಯಕ್ಕೆ ಸೊಲೊಮನ್ ದ್ವೀಪಗಳಿಗೆ ಮರಳಲು ಅವಕಾಶವಿಲ್ಲ ಎಂದು ವರದಿಗಳು ಹೇಳಿವೆ.