ಲಂಡನ್: ಹೃದಯಾಘಾತ, ಪಾರ್ಶ್ವವಾಯುವಿನಂತಹ ಆರೋಗ್ಯ ಸಮಸ್ಯೆ ತಡೆ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಮಹತ್ವದ ಅಭಿಯಾನ ಆರಂಭಿಸಿದೆ.
ಕ್ಷೌರದಂಗಡಿ, ಪ್ರಾರ್ಥನಾ ಸ್ಥಳಗಳಲ್ಲಿಯೂ ರಕ್ತದೊತ್ತಡ ಪರೀಕ್ಷೆ ಸೌಲಭ್ಯ ವಿಸ್ತರಿಸುವುದಾಗಿ ಹೇಳಲಾಗಿದೆ. ಸ್ಥಳೀಯ ಆರೋಗ್ಯ ಸೇವಾ ಸಿಬ್ಬಂದಿಯನ್ನು ಜನರು ಇರುವಲ್ಲಿಗೆ ಕಳಿಸಿ ತಪಾಸಣೆ ನಡೆಸಲಾಗುವುದು. ಸಂಭಾವ್ಯ ಆರೋಗ್ಯ ಸಮಸ್ಯೆಗಳು ಗಂಭೀರ ಸ್ವರೂಪಕ್ಕೆ ತಿರುಗುವ ಮುನ್ನ ಪತ್ತೆ ಮಾಡಿ ಚಿಕಿತ್ಸೆ ಕೊಡಲಾಗುವುದು ಎಂದು ಬ್ರಿಟನ್ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸೇವೆ ಮಾಹಿತಿ ನೀಡಿದೆ.
ಹೃದಯಘಾತದಂತಹ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ಸೂಚನೆ ನೀಡುವ ರಕ್ತದೊತ್ತಡ ಪರೀಕ್ಷೆ ಸುಲಭದಲ್ಲಿ ಸಿಗುವಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ಷೌರದಂಗಡಿ ಮತ್ತು ಪ್ರಾರ್ಥನಾ ಸ್ಥಳಗಳಲ್ಲಿ ರಕ್ತದೊತ್ತಡ ಪರೀಕ್ಷೆ ಸೌಲಭ್ಯ ವಿಸ್ತರಿಸುವುದಾಗಿ ಇಂಗ್ಲೆಂಡ್ ಮುಖ್ಯ ಔಷಧ ಅಧಿಕಾರಿ ಡೇವಿಡ್ ವೆಬ್ ಮಾಹಿತಿ ನೀಡಿದ್ದಾರೆ.
ಅಧಿಕ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಮೂರನೇ ಅತಿದೊಡ್ಡ ಅಪಾಯಕಾರಿ ಅಂಶವಾಗಿದೆ. ಇನ್ನೂ ಅನೇಕ ಜನರಿಗೆ ತಮ್ಮಲ್ಲಿ ಬಿಪಿ ಇದೆ ಎಂದು ತಿಳಿದಿರುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿರಲ್ಲ. ಹೀಗಾಗಿ ರಕ್ತದೊತ್ತಡ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದೆ.