ರಾಜಸ್ಥಾನದ ಜೈಸಲ್ಮೇರ್‌ನಲ್ಲಿರೋ ಹಳ್ಳಿಯೊಂದರಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವಿದೆ. ಸಾಮಾನ್ಯ ಸಾಮಾಜಿಕ ರೂಢಿಗಳಿಗೇ ಸವಾಲೊಡ್ಡುವಂತಹ ಸಂಪ್ರದಾಯ ಇದು. ರಾಮದೇವ್-ಕಿ-ಬಸ್ತಿ ಎಂಬ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ವಿಚಿತ್ರ ಅಂದ್ರೆ ಈ ಗ್ರಾಮದ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ. ಇವರು ಏಕಪತ್ನಿತ್ವದ ಪದ್ಧತಿಯನ್ನು ಅನುಸರಿಸುವುದಿಲ್ಲ.
ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು ಎಂಬುದು ಇವರ ನಂಬಿಕೆ. ಒಂದೇ ಸೂರಿನಡಿ ಇಬ್ಬರು ಪತ್ನಿಯರೊಂದಿಗೆ ಇವರು ವಾಸಿಸುತ್ತಾರೆ. ಈ ಗ್ರಾಮದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಇದು.
ಹಿಂದೂ ವಿವಾಹ ಕಾಯಿದೆಯಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ಈ ಗ್ರಾಮವು ಬಹುಪತ್ನಿತ್ವದಲ್ಲಿ ನಂಬಿಕೆ ಇಟ್ಟಿದೆ. ಈ ಆಚರಣೆಯ ಹಿಂದಿನ ತರ್ಕವು ಪುರುಷ ಉತ್ತರಾಧಿಕಾರಿಗಳನ್ನು ಹೊಂದುವ ಬಯಕೆಗೆ ಸಂಬಂಧಿಸಿದೆ. ಮೊದಲ ಪತ್ನಿ ಗಂಡು ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ, ಆಕೆ ಹೆಣ್ಣು ಮಕ್ಕಳನ್ನೇ ಹೆರುತ್ತಾಳೆ ಎಂಬುದು ಈ ಗ್ರಾಮಸ್ಥರ ನಂಬಿಕೆ. ತಮ್ಮ ವಂಶಕ್ಕೆ ಪುರುಷ ಉತ್ತರಾಧಿಕಾರಿಯನ್ನು ಪಡೆಯುವ ಭರವಸೆಯಲ್ಲಿ ಎರಡನೇ ಮದುವೆಯಾಗುತ್ತಾರೆ. ಇದರಿಂದಾಗಿ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆಯಂತೆ.
ವಾರಸುದಾರನ ಹೆಸರಿನಲ್ಲಿ ಪುರುಷರು ಎರಡನೇ ಬಾರಿಗೆ ಮದುವೆಯಾಗುತ್ತಿದ್ದಾರೆ. ಈ ಪದ್ಧತಿ ಮುಂದುವರಿದಿರುವುದು ಸಮುದಾಯದೊಳಗೆ ಚರ್ಚೆಗೆ ಗ್ರಾಸವಾಗಿದೆ. ಈ ಸಂಪ್ರದಾಯದ ಬಗ್ಗೆ ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬಳನ್ನು ಮದುವೆಯಾಗುವುದು ಮಹಿಳೆಯರ ಮೂಲಭೂತ ಮಾನವ ಹಕ್ಕುಗಳನ್ನು ಮತ್ತು ಸಮಾನತೆಯನ್ನು ಕಸಿದುಕೊಳ್ಳುತ್ತದೆ ಎಂಬುದು ಪ್ರಜ್ಞಾವಂತರ ವಾದ.