ಹೆಚ್ಚಿನ ಪುರುಷರು ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಗುಪ್ತಾಂಗಗಳ ರೋಗಗಳ ಬಗ್ಗೆ ಹೆಚ್ಚು ನಿರ್ಲಕ್ಷಿಸುತ್ತಾರೆ. ಮುಜುಗರ ಎಂಬ ಕಾರಣಕ್ಕೆ ಅನೇಕ ಪುರುಷರು ಈ ಸಮಸ್ಯೆ ಇಟ್ಟುಕೊಂಡು ವೈದ್ಯರ ಬಳಿ ಹೋಗುವುದಿಲ್ಲ. ಕೆಲವೊಮ್ಮೆ ಇಂಥ ಸಣ್ಣ ರೋಗ, ದೊಡ್ಡ ಮಾರಕ ಖಾಯಿಲೆಗೆ ಕಾರಣವಾಗಬಹುದು.
ಮೂತ್ರ ವಿಸರ್ಜನೆ ಮಾಡುವಾಗ ತೊಂದರೆಯಾಗುವುದು ಅಥವಾ ಉರಿಮೂತ್ರದ ತೊಂದರೆಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದು ಪ್ರಾಸ್ಟೇಟ್ ಕ್ಯಾನ್ಸರ್ ಆಗಿರುವ ಸಾಧ್ಯತೆಯಿರುತ್ತದೆ. ಪ್ರಾಸ್ಟೇಟ್ ನ ತೊಂದರೆ ಹೆಚ್ಚಾದರೆ, ಮೂತ್ರನಾಳದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಇದರ ಲಕ್ಷಣಗಳು ಹೆಚ್ಚು. ಮೂತ್ರ ವಿಸರ್ಜನೆ ಕಷ್ಟವಾಗುತ್ತಿದ್ದರೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆ ಆಗ್ತಾ ಇದ್ರೆ ಖಂಡಿತವಾಗಿಯೂ ವೈದ್ಯರನ್ನ ಭೇಟಿ ಮಾಡಿ.
ಮಾನಸಿಕ ಒತ್ತಡ ಹೆಚ್ಚಾದಲ್ಲಿ ಖಿನ್ನತೆಗೆ ಒಳಗಾಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ವಿಶ್ವಾದಾದ್ಯಂತ 30-45ರ ವಯಸಿನ ಪುರುಷರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದು ಕೂಡ ಮಾನಸಿಕ ಖಾಯಿಲೆಯಾಗಿದ್ದು, ಚಿಕಿತ್ಸೆಯ ಅಗತ್ಯವಿದೆ.