ಧಾರವಾಡ: ಧಾರವಾಡ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಅತಿಥಿಗಳು ಮತ್ತು ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳಿಗೆ ಕಾಣಿಕೆಯಾಗಿ ನೀಡಲು ಗರಗ ಮತ್ತು ಬೇಂಗೇರಿ ಖಾದಿ ಕೇಂದ್ರಗಳಲ್ಲಿ ಸುಮಾರು 7,500 ಕ್ಕೂ ಹೆಚ್ಚು ಖಾದಿ ಧ್ವಜ ಹೊಂದಿರುವ ನೆನಪಿನ ಕಾಣಿಕೆಗಳನ್ನು ತಯಾರಿಸಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕಾಣಿಕೆಯಾಗಿ ನೀಡಲು ರಾಷ್ಟ್ರಧ್ವಜ ಇರುವ 12 ಇಂಚು ಉದ್ದ 18 ಇಂಚು ಅಳತೆಯ ಟಿಕ್‍ವುಡ್ ಫ್ರೇಮ್ ಹೊಂದಿರುವ ನೆನಪಿನ ಕಾಣಿಕೆಯನ್ನು ರೂಪಿಸಲಾಗಿದೆ. ಈ ಕಾಣಿಕೆಯನ್ನು ವಿಶೇಷವಾಗಿ ಯಲ್ಲಾಪುರದ ಕಲಾವಿದರು ರೂಪಿಸಿದ್ದಾರೆ.
ಯುವಜನೋತ್ಸವದ ಅತಿಥಿಗಳಿಗೆ ನೀಡುವ ನೆನಪಿನ ಕಾಣಿಕೆಯು 4×6 ಅಳತೆಯ ರಾಷ್ಟ್ರಧ್ವಜದೊಂದಿಗೆ 6×9 ಅಳತೆ ಹೊಂದಿದೆ. ಇಡೀ ರಾಷ್ಟ್ರದಲ್ಲಿಯೇ ರಾಷ್ಟ್ರಧ್ವಜಗಳನ್ನು ಅಧಿಕೃತವಾಗಿ ರೂಪಿಸಿ ಪೂರೈಸಲು ಅನುಮತಿ ಹೊಂದಿರುವ ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳು ನಮ್ಮ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರದಾದ್ಯಂತ ಪಸರಿಸಲು ಈ ಕಾಣಿಕೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.