ಗುರುವಾರದಂದು ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಶೇಕಡ 59.24 ರಷ್ಟು ಮತ ಚಲಾವಣೆಯಾಗಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.
ಮೊದಲ ಹಂತದ ಮತದಾನದ ವೇಳೆ ಅಮ್ರೇಲಿ ವಿಧಾನಸಭಾ ಕ್ಷೇತ್ರದಲ್ಲಿ ಅವಿಭಕ್ತ ಕುಟುಂಬದ 60 ಮಂದಿ ಸದಸ್ಯರು ಬ್ಯಾಂಡ್ ಸಹಿತ ಮೆರವಣಿಗೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಮ್ರೇಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಅವರ ಕುಟುಂಬಸ್ಥರು ಈ ರೀತಿ ಒಟ್ಟಾಗಿ ಬಂದು ಮತ ಚಲಾಯಿಸಿದವರಾಗಿದ್ದಾರೆ.
ಈ ಕುಟುಂಬದ ಕೆಲವು ಸದಸ್ಯರು ಉದ್ಯೋಗ ಸೇರಿದಂತೆ ಇತರೆ ಕಾರಣಗಳಿಂದ ಬೇರೆ ಊರುಗಳಲ್ಲಿ ವಾಸಿಸುತ್ತಿದ್ದರೂ ಸಹ ಈಗಲೂ ಅವಿಭಕ್ತ ಕುಟುಂಬವಾಗಿಯೇ ಉಳಿದಿದ್ದಾರೆ. ಅಲ್ಲದೆ ವಿಶೇಷ ಸಂದರ್ಭಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಸೇರುತ್ತಿದ್ದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಮತದಾನದ ದಿನದಂದು ಸಹ 60 ಸದಸ್ಯರು ಜೊತೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ.