ಮಂಡ್ಯ : ಜಿಲ್ಲೆಯ ಮೇಲುಕೋಟೆಯಲ್ಲಿ ಖಾಸಗಿ ಶಾಲಾ ಶಿಕ್ಷಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಶವ ಪತ್ತೆಯಾದಾಗಿನಿಂದ ತಲೆಮರೆಸಿಕೊಂಡಿದ್ದ ಅದೇ ಗ್ರಾಮದ ವ್ಯಕ್ತಿ ನಿತೀಶ್ ಕೊಲೆ ಮಾಡಿದ್ದ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗ ನರಸಿಂಹ ದೇವಸ್ಥಾನದ ಬಳಿ ಜನವರಿ 20ರಂದು ನಾಪತ್ತೆಯಾಗಿದ್ದ ದೀಪಿಕಾ ವಿ.ಗೌಡ (28) ಶವ ಪತ್ತೆಯಾಗಿದೆ. ಬಂಧಿತ ವ್ಯಕ್ತಿಯನ್ನು ನಿತೀಶ್ ಎಂದು ಗುರುತಿಸಲಾಗಿದೆ. ಮೃತ ಯುವತಿ ಮತ್ತು ಆರೋಪಿ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ನಿವಾಸಿಗಳು.
ದೀಪಿಕಾ ಶನಿವಾರ ಬೆಳಿಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದರು. ಮಧ್ಯಾಹ್ನ 12.06 ಕ್ಕೆ ಶಾಲೆಯಿಂದ ಹೊರಟಿದ್ದಳು. ನಂತರ ಏಕಾಏಕಿ ಅಂದಿನಿಂದ ಅವಳು ಕಾಣೆಯಾಗಿದ್ದಳು. ದೀಪಿಕಾ ಅವರ ಪತಿ ಲೋಕೇಶ್ ಅವರ ಪ್ರಕಾರ, ದೀಪಿಕಾ ಅವರ ಮೊಬೈಲ್ ಸ್ವಿಚ್ ಆಫ್ ಆಗುವ ಮೊದಲು ನಿತೀಶ್ ಅವರಿಗೆ ಕೊನೆಯ ಕರೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲೇ ಗುಂಡಿ ತೋಡಿದ್ದ ಹಂತಕ
ದೀಪಿಕಾಳನ್ನು ಕೊಲೆ ಮಾಡುವ ಮುನ್ನ ನಿತೀಶ್ ಗುಂಡಿ ತೋಡಿಟ್ಟಿದ್ದನು ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಮೊದಲೇ ದೀಪಿಕಾಳನ್ನು ಕೊಲೆ ಮಾಡಲು ಈತ ಪ್ಲ್ಯಾನ್ ಮಾಡಿದ್ದನು. ಸಂಚು ರೂಪಿಸಿ ಶಾಲಿನಿಂದ ದೀಪಿಕಾಳ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೊದಲೇ ತೋಡಿಟ್ಟಿದ್ದ ಗುಂಡಿಯಲ್ಲಿ ಆಕೆಯನ್ನು ಹೂತು ಹಾಕಿ ಎಸ್ಕೇಪ್ ಆಗಿದ್ದನು.
ದೀಪಿಕಾ ಕಾಣೆಯಾದ ದಿನ ಪೊಲೀಸರು ಮೇಲುಕೋಟೆ ಬೆಟ್ಟದ ಬಳಿ ಬಿಟ್ಟುಹೋದ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿದ್ದರು. ಅವರು ವಾಹನದ ಬಗ್ಗೆ ವಿಚಾರಿಸಿದ ನಂತರ ಅದು ದೀಪಿಕಾಗೆ ಸೇರಿದ್ದು ಎಂದು ತಿಳಿದುಬಂದಿದೆ. ಪೊಲೀಸರು ದೀಪಿಕಾ ಅವರ ತಂದೆಯನ್ನು ಸಂಪರ್ಕಿಸಿ ಬೈಕಿನ ಬಗ್ಗೆ ಮಾಹಿತಿ ನೀಡಿದರು.
ವಿಡಿಯೋ ಸುಳಿವು..!
ಈ ನಡುವೆ ದೀಪಿಕಾ ಕಾಣೆಯಾಗಿದ್ದಾಳೆ ಎಂದು ಪತಿ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದ್ವಿಚಕ್ರ ವಾಹನ ಪತ್ತೆಯಾದ ಸ್ಥಳದಲ್ಲಿ ದೀಪಿಕಾ ಹಾಗೂ ನಿತೀಶ್ ಜಗಳವಾಡುತ್ತಿರುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ದೀಪಿಕಾ ಮತ್ತು ನಿತೀಶ್ ಕಳೆದ ಎರಡು ವರ್ಷಗಳಿಂದ ಆಪ್ತರಾಗಿದ್ದರು. ದೀಪಿಕಾಳಿಂದ ದೂರವಿರಲು ದೀಪಿಕಾ ಕುಟುಂಬ ಕೂಡ ನಿತೀಶ್ ಗೆ ಎಚ್ಚರಿಕೆ ನೀಡಿತ್ತು.
ಹುಟ್ಟುಹಬ್ಬದಂದೇ ಕೊಲೆ ಮಾಡಿದ ಕಿರಾತಕ
ಶನಿವಾರ ಆರೋಪಿ ನಿತೀಶ್ ಜನ್ಮದಿನವಾಗಿತ್ತು. ತನ್ನ ಹುಟ್ಟುಹಬ್ಬವನ್ನು ಆಚರಿಸಲು ಅವನು ದೀಪಿಕಾಳನ್ನು ಮೇಲುಕೋಟೆ ಬೆಟ್ಟಕ್ಕೆ ಕರೆದಿದ್ದಾನೆ . ದೀಪಿಕಾ ತನ್ನನ್ನು ದೂರ ಮಾಡುತ್ತಿದ್ದರಿಂದ ನಿತೀಶ್ ಅಸಮಾಧಾನಗೊಂಡಿದ್ದರು, ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು ಮತ್ತು ಕೊಲೆಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.