ಮಂಡ್ಯ: ಮುಡಾ ಹಗರಣದ ಬೆನ್ನಲ್ಲೇ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚಲುವನಾರಾಯಣ ಸ್ವಾಮಿ ಆಸ್ತಿ ಭೂಗಳ್ಳರ ಪಾಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನೂರಾರು ಕೋಟಿ ಆಸ್ತಿ ಕಬಳಿಸಲು ಸಂಚು ರೂಪಿಸಲಾಗಿದೆ. ಉಪ ವಿಭಾಗಾಧಿಕಾರಿ ರಕ್ಷಿತ್ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಭೂಗಳ್ಳರಿಗೆ ಅಕ್ರಮ ಪರಭಾರೆ ಮಾಡಿದ್ದಾರೆ ಎಂದು ಚಲುವನಾರಾಯಣಸ್ವಾಮಿ ಭಕ್ತ ರವಿಕುಮಾರ್ ಆರೋಪಿಸಿದ್ದಾರೆ.
ತನ್ನ ಸ್ನೇಹಿತರಾದ ಕಂಟ್ರ್ಯಾಕ್ಟರ್ ಸತೀಶ್ ಬಾಬು ರೆಡ್ಡಿ ಎಂಬುವವರಿಗೆ ಭೂಮಿ ಕೊಡಿಸಲು ಯತ್ನ ನಡೆದಿದೆ ಎಂದು ರವಿ ಕುಮಾರ್ ತಿಳಿಸಿದ್ದಾರೆ. ಮೈಸೂರಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿ 21.5 ಎಕರೆ ಭೂಮಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ದೇವಾಲಯಕ್ಕೆ ಸೇರಿದ ಜಮೀನು ಅನ್ಯರಿಗೆ ಪರಭಾರೆ ಮಾಡುವಲ್ಲಿ ಕಂದಾಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೊಪ ಕೇಳಿಬಂದಿದೆ.
ಜಮೀನನ್ನು ಮತೆ ದೇವಾಲಯದ ಹೆಸರಿಗೆ ವರ್ಗಾಯಿಸುವಂತೆ ರವಿ ಕುಮಾರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.