ಮಂಡ್ಯ: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಟಿಪ್ಪು ಹೆಸರಿನಲ್ಲಿ ನಡೆಯುತ್ತಿರುವ ಸಲಾಂ ಮಂಗಳಾರತಿ ನಿಲ್ಲಿಸುವಂತೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಇದೀಗ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿಯೂ ಸಲಾಂ ಆರತಿ ಹೆಸರು ಬದಲಿಸುವಂತೆ ಒತ್ತಾಯಗಳು ಕೇಳಿಬಂದಿವೆ.
ಮೇಲುಕೋಟೆಯಲ್ಲಿ ನಡೆಯುತ್ತಿರುವ ಸಲಾಂ ಆರತಿಯ ಹೆಸರನ್ನು ಬದಲಿಸಬೇಕು. ಸಲಾಂ ಹೆಸರು ಕೈಬಿಟ್ಟು ಸಂಧ್ಯಾರತಿ ಎಂದು ಹೆಸರು ಬದಲಿಸುವಂತೆ ಮೇಲುಕೋಟೆ ಸ್ಥಾನಿಕರಾದ ಶ್ರೀನಿವಾಸ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತ್ರಿಕಾಲದಲ್ಲಿಯೂ ದೇವರಿಗೆ ಆರತಿ ಬೆಳಗುವ ಪದ್ಧತಿ ಎಲ್ಲಾ ದೇವಾಲಯಗಳಲ್ಲಿಯೂ ಇದೆ. ಮೇಲುಕೋಟೆಯಲ್ಲಿ ಸಂಜೆ ವೇಳೆ ನಡೆಯುವ ಸಂಧ್ಯಾರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಸ್ಲಿಂ ದಾಳಿಕೋರರು, ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ. ಮೂಲ ಮೂರ್ತಿಗೆ ಆರತಿ ಮಾಡುವಾಗ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತದೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿ ದೀವಟಿಗೆ ಸಲಾಂ ಮಾಡಲಾಗುತ್ತದೆ. ಚೆಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತದೆ. ಇಲ್ಲಿನ ಸಲಾಂ ಆರತಿ ಪದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಸಲಾಂ ಹೆಸರು ಕೈಬಿಟ್ಟು ಸಂಧ್ಯಾರತಿ ಎಂಬ ಪದವನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.