ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಿದರು.
ದೆಹಲಿಯ ಗರ್ಹಿ ಗ್ರಾಮಕ್ಕೆ ಹೋಗಿ ಅಲ್ಲಿ ಅವರು ವಯಸ್ಸಾದ ಮಹಿಳಾ ಪಿಂಚಣಿದಾರರು ಮತ್ತು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರೊಂದಿಗೆ ಸಂವಹನ ನಡೆಸಿದರು. ಹಣಕಾಸಿನ ವಹಿವಾಟುಗಳು ಈಗ ಭಾರತದ ಡಿಜಿಟಲ್ ಮೂಲ ಸೌಕರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಭೇಟಿಯ ಸಮಯದಲ್ಲಿ ತಿಳಿದುಕೊಂಡರು.
ಅಲ್ಲದೇ ಸ್ಥಳೀಯ ಅಂಗಡಿಯೊಂದರಲ್ಲಿ ಪೇಟಿಎಂ ಮೂಲಕ ಪಾವತಿ ಮಾಡಿದರು. ಗೇಟ್ಸ್ ಫೌಂಡೇಶನ್ ಇಂಡಿಯಾದ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಇವರು ಸ್ಥಳೀಯ ಅಂಗಡಿಯಲ್ಲಿ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿರುವುದು ಕಂಡುಬಂದಿದೆ.
“ಮೆಲಿಂಡಾ ಗೇಟ್ಸ್ ನವದೆಹಲಿಯ ಗರ್ಹಿ ಗ್ರಾಮಕ್ಕೆ ಭೇಟಿ ನೀಡಿದರು ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಹೇಗೆ ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ ಎಂಬುದನ್ನು ವೀಕ್ಷಿಸಿದರು” ಎಂದು ಟ್ವಿಟರ್‌ನಲ್ಲಿ ಹೇಳಲಾಗಿದೆ.
ಭಾರತದ ಡಿಜಿಟಲ್ ಕ್ರಾಂತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಪಾವತಿಗಳಲ್ಲಿ ಮಾತ್ರವಲ್ಲದೆ ಸಾರಿಗೆ, ಆರೋಗ್ಯ, ರಕ್ಷಣೆ ಮತ್ತು ಸರ್ಕಾರಿ ವಲಯದಲ್ಲೂ ಬದಲಾವಣೆಯನ್ನು ಕಾಣುತ್ತಿರುವ ಪೀಳಿಗೆಯ ಭಾಗವಾಗಲು ತಾನು ಹೆಮ್ಮೆಪಡುತ್ತೇನೆ ಎಂದರು.