
ವಾಷಿಂಗ್ಟನ್: ವಿಶ್ವದ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಪರಾಭವಗೊಂಡ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ ಎಂದು ಹೇಳಲಾಗಿದೆ.
ಅವರ ಸಲಹೆಗಾರರಾಗಿದ್ದವರೇ ರಹಸ್ಯ ಬಿಚ್ಚಿಟ್ಟಿದ್ದು, ಮೆಲಾನಿಯಾ ಟ್ರಂಪ್ ಡೈವೋರ್ಸ್ ಕೊಡುತ್ತಾರೆ ಎಂದು ಹೇಳಲಾಗಿದೆ. ಮೆಲಾನಿಯಾ ಟ್ರಂಪ್ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ.
ಯಾವುದೇ ಕ್ಷಣದಲ್ಲಿ ಮೆಲಾನಿಯಾ ಟ್ರಂಪ್ ಪತಿಗೆ ಡೈವೋರ್ಸ್ ನೀಡಬಹುದು. ಅಂದ ಹಾಗೆ, ಶಕ್ತಿ ಕೇಂದ್ರ ಶ್ವೇತಭವನದಲ್ಲಿ ಪ್ರತ್ಯೇಕ ಬೆಡ್ರೂಮ್ ಹೊಂದಿದ್ದ ಟ್ರಂಪ್ ಅವರ ಮದುವೆ ಒಂದು ವ್ಯವಹಾರದ ರೀತಿ ಇತ್ತು ಎಂದು ಮೆಲಾನಿಯಾ ಟ್ರಂಪ್ ವಿಚ್ಛೇದನದ ಕುರಿತಾಗಿ ಸಲಹೆಗಾರರಾಗಿದ್ದ ಸ್ಟೆಫನಿ ವೋಲ್ಕಾಫ್ ಅವರನ್ನು ಉಲ್ಲೇಖಿಸಿ, ಬ್ರಿಟಿಷ್ ಟ್ಯಾಬ್ಲಾಯ್ಡ್ ‘ಡೈಲಿ ಮೇಲ್’ ವರದಿ ಮಾಡಿದೆ. ಡೈವೋರ್ಸ್ ಒಪ್ಪಂದದ ಬಗ್ಗೆ ಮಾತುಕತೆ ನಡೆದಿದೆ. ಟ್ರಂಪ್ ಅವರ ಮಗ ಬ್ಯಾರನ್ ಸಮಾನ ಪಾಲು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ಮತ್ತೋರ್ವ ಮಾಜಿ ಸಹಾಯಕ ಒಮರೋಸಾ ಮನಿಗಾಲ್ಟ್ ನ್ಯೂಮನ್ ಅವರು, ಡೊನಾಲ್ಡ್ ಟ್ರಂಪ್ ದಂಪತಿಯ 15 ವರ್ಷದ ದಾಂಪತ್ಯ ಅಂತ್ಯವಾಗುತ್ತದೆ. ಶ್ವೇತಭವನದಿಂದ ಹೊರಬಂದ ಬಳಿಕ ಮೆಲಾನಿಯಾ ಟ್ರಂಪ್ ಪ್ರತಿಕ್ಷಣವನ್ನು ಎಣಿಕೆ ಮಾಡುತ್ತಿದ್ದು, ಅವರು ಯಾವುದೇ ಕ್ಷಣದಲ್ಲಿ ವಿಚ್ಛೇದನ ಕೊಡಬಹುದು ಎಂದು ತಿಳಿಸಿದ್ದಾರೆ. ಆದರೆ, ಡೈವೋರ್ಸ್ ವದಂತಿ ಹರಿದಾಡುತ್ತಿರುವುದನ್ನು ತಳ್ಳಿಹಾಕಿರುವ ಮೆಲಾನಿಯಾ ಟ್ರಂಪ್ ಡೊನಾಲ್ಡ್ ಟ್ರಂಪ್ ಜೊತೆಗೆ ನಾನು ಉತ್ತಮ ಬಾಂಧವ್ಯ ಸಂಬಂಧ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.