ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಇಂದಿನಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಪಾದಯಾತ್ರೆ ಸಾಗಲಿದೆ.
ಕಾಂಗ್ರೆಸ್ ಪಾದಯಾತ್ರೆಯ ವಿರುದ್ಧ ಜೆಡಿಎಸ್ ಈಗಾಗಲೇ ಕಿಡಿಕಾರಿದೆ. ಜೆಡಿಎಸ್ ಭದ್ರಕೋಟೆ ರಾಮನಗರಕ್ಕೆ ಎಂಟ್ರಿಕೊಟ್ಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಸ ಸಂದೇಶ ನೀಡಲಿದ್ದಾರೆ. ಮುಂದಿನ ಚುನಾವಣೆಗೆ ಸಿದ್ಧರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪಾದಯಾತ್ರೆಯ ವೇಳೆ ನೈತಿಕ ಬೆಂಬಲ ನೀಡಲಿದ್ದು, ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಇಂದಿನ ಪಾದಯಾತ್ರೆ ವೇದಿಕೆಯಾಗಲಿದೆ. ಅಲ್ಲದೇ, ಇವತ್ತಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆಗೆ ಆಗಮಿಸಲಿದ್ದು, ಮತ್ತಷ್ಟು ಹುರುಪು ತರಲಿದೆ.
ಮೂರನೇ ದಿನದ ಯಾತ್ರೆ:
ಮೂರನೇ ದಿನದ ಪಾದಯಾತ್ರೆ ಇಂದು ಕನಕಪುರದಿಂದ ಆರಂಭವಾಗಲಿದೆ. ಬೆಳಗ್ಗೆ 9.30 ಕ್ಕೆ ಕನಕಪುರದಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಗಾಣಾಳು ವೀರಭದ್ರ ಸ್ವಾಮಿ ದೇಗುಲ ತಲುಪಲಿದೆ. ದೇವಸ್ಥಾನದಲ್ಲಿ ಊಟ ಮಾಡಿದ ನಂತರ ವಿಶ್ರಾಂತಿ ಪಡೆಯಲಿರುವ ನಾಯಕರು ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿದ್ದಾರೆ. ಇಂದು ರಾತ್ರಿ ಚಿಕ್ಕೇನಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಜನವರಿ 9 ರಂದು ಕನಕಪುರ ತಾಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆ ಆರಂಭವಾಗಿದ್ದು, ಜನವರಿ 19ರಂದು ಬೆಂಗಳೂರು ತಲುಪಲಿದೆ.
ಅಚ್ಚರಿ ಮೂಡಿಸಿದ ಡಿಕೆಶಿ ನಡೆ:
ಪಾದಯಾತ್ರೆಯಲ್ಲಿ ಮೂರು ದಿನ ಮೌನವಾಗಿರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಅವರ ನಡೆ ಅಚ್ಚರಿ ಮೂಡಿಸಿದೆ. ರಾಜಕೀಯ ಸಲಹಾ ತಂಡ ನೀಡಿದ ಸಲಹೆ ಮೇರೆಗೆ ಡಿ.ಕೆ. ಶಿವಕುಮಾರ್ ಮೂರು ದಿನ ಮೌನವಹಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮೂರು ದಿನಗಳ ಕಾಲ ಪಾದಯಾತ್ರೆಯಲ್ಲಿ ಮೌನವಾಗಿರುವುದು ಸರಿಯಲ್ಲ. ಪಾದಯಾತ್ರೆಯಲ್ಲಿ ಮಾತನಾಡಿದರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಮಾತನಾಡಿ ಎಂದು ಹಿರಿಯ ನಾಯಕರು ಹೇಳಿದ್ದಾರೆ. ರಾಜಕೀಯ ಬೆಳವಣಿಗೆ ಮೇಲೆ ಡಿಕೆಶಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.