ಬೆಂಗಳೂರು: ಮೇಕೆದಾಟು ಯೋಜನೆಗೆ ಇಂದು ಕಾಂಗ್ರೆಸ್ ನಿಂದ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರನ್ನು ಅರೆಸ್ಟ್ ಮಾಡದಿರಲು ಸರ್ಕಾರ ನಿರ್ಧರಿಸಿದೆ.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರನ್ನು ಬಂಧಿಸಬಾರದು ಎಂದು ಹಿರಿಯ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆನ್ನಲಾಗಿದೆ. ಕಾಂಗ್ರೆಸ್ ನಾಯಕರನ್ನು ಬಂಧನಕ್ಕೆ ಒಳಪಡಿಸಬೇಡಿ ಜನರ ಮುಂದೆ ತೋರಿಸಿ. ನಿಯಮ ಉಲ್ಲಘಿಸಿದ ಬಗ್ಗೆ ಅವರನ್ನು ಜನರಿಗೆ ತೋರಿಸಬೇಕು. ಕೊರೋನಾ ಸಮಸ್ಯೆ ಎದುರಾದರೆ ಅವರೇ ಜವಾಬ್ದಾರಿ ಆಗುತ್ತಾರೆ. ಸರ್ಕಾರದಷ್ಟೇ ವಿರೋಧ ಪಕ್ಷದವರಿಗೆ ಕೂಡ ಜವಾಬ್ದಾರಿಯಿದೆ. ಅವರು ಪಾದಯಾತ್ರೆ ಮಾಡಲಿ. ಬಂಧಿಸಬೇಡಿ ಎಂದು ಹಿರಿಯ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ. ಸಚಿವರ ಮಾತಿಗೆ ಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಇದ್ರೂ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದ್ದು, ಇದಕ್ಕೆ ಅಡ್ಡಿಪಡಿಸಬೇಡಿ ಎಂದು ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ. ಇನ್ನು 165 ಕಿ.ಮೀ. ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ.