
ರಾಮನಗರ: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಿಂದ ಕೈಗೊಂಡಿರುವ ಪಾದಯಾತ್ರೆ ಇಂದು ಎರಡನೇ ದಿನ ಮುಂದುವರೆಯಲಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲನಹಳ್ಳಿಯಿಂದ ಇಂದು ಎರಡನೇ ದಿನದ ಪಾದಯಾತ್ರೆ ಆರಂಭವಾಗಲಿದೆ.
ಕನಕಪುರದವರೆಗೆ 16 ಕಿಲೋಮೀಟರ್ ಪಾದ ಯಾತ್ರೆ ಸಾಗಲಿದೆ. ಬೆಳಗ್ಗೆ 9 ಗಂಟೆಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಮಾದಪ್ಪನ ದೊಡ್ಡಿಗೆ ತಲುಪಲಿದೆ. ಮಧ್ಯಾಹ್ನ ಭೋಜನ ಸೇವಿಸಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಮಾದಪ್ಪನ ದೊಡ್ಡಿಯಿಂದ ಕನಕಪುರದವರೆಗೆ ಪಾದಯಾತ್ರೆ ಸಾಗಲಿದೆ. ಇಂದು ರಾತ್ರಿ ಕನಕಪುರದಲ್ಲಿ ನಾಯಕರು ವಾಸ್ತವ್ಯ ಹೂಡಲಿದ್ದಾರೆ.
ಇಂದಿನ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಜ್ವರ ಹಿನ್ನೆಲೆಯಲ್ಲಿ ನಿನ್ನೆ 4 ಕಿಲೋ ಮೀಟರ್ ನಷ್ಟು ಹೆಜ್ಜೆ ಹಾಕಿದ್ದ ಸಿದ್ಧರಾಮಯ್ಯ ಪಾದಯಾತ್ರೆ ಮೊಟಕುಗೊಳಿಸಿ ವಾಪಸ್ಸಾಗಿದ್ದರು. ಎರಡನೇ ದಿನದ ಪಾದಯಾತ್ರೆಯಲ್ಲಿ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.