ಜಮ್ಮು ಮತ್ತು ಕಾಶ್ಮೀರ ಆಡಳಿತವು, ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರಿಗೆ ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ನೋಟಿಸ್ ನೀಡಿದೆ. ಶ್ರೀನಗರದ ವಿಐಪಿ ಎನ್ ಕ್ಲೇವ್ ರಸ್ತೆಯಲ್ಲಿರುವ ಈ ಬಂಗಲೆಯಲ್ಲಿ ಮೆಹಬೂಬಾ ಮುಫ್ತಿ ಕಳೆದ ಒಂದೂವರೆ ದಶಕಗಳಿಂದ ವಾಸಿಸುತ್ತಿದ್ದಾರೆ.
ಈ ಮೊದಲೂ ಅವರಿಗೆ ಒಮ್ಮೆ ನೋಟಿಸ್ ನೀಡಲಾಗಿತ್ತಾದರೂ ಬಂಗಲೆಯನ್ನು ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದ್ದು, ಈ ಬಂಗಲೆ ತೆರವುಗೊಳಿಸಿದ ಬಳಿಕ ಭದ್ರತೆ ಅಥವಾ ಇತರ ಆಧಾರದ ಮೇಲೆ ಪರ್ಯಾಯ ವಸತಿ ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ತಮಗೆ ನೋಟಿಸ್ ತಲುಪಿರುವುದನ್ನು ಖಚಿತಪಡಿಸಿರುವ ಮೆಹಬೂಬಾ ಮುಫ್ತಿ, ಪರ್ಯಾಯ ವಸತಿ ಪ್ರಸ್ತಾವವನ್ನು ಸ್ವೀಕರಿಸುವ ಕುರಿತು ತಾವು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜಮ್ಮು ಕಾಶ್ಮೀರ ಆಡಳಿತ, ಬಂಗಲೆ ತೆರವುಗೊಳಿಸುವಂತೆ ನೀಡಿರುವ ನೋಟಿಸ್ ಅನಿರೀಕ್ಷಿತ ಮತ್ತು ಅಚ್ಚರಿ ತರುವಂತದ್ದೇನು ಅಲ್ಲ. ಇದು ನಿರೀಕ್ಷಿತವಾಗಿತ್ತು ಎಂದು ಹೇಳಿದ್ದಾರೆ.