ಮೇಘಾಲಯದಲ್ಲೊಂದು ಅಮಾನವೀಯ ಕೃತ್ಯ ನಡೆದಿದೆ. ಶಾಲೆಯಲ್ಲಿ ಇಂಗ್ಲಿಷ್ ಮಾತನಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಇತರೆ ಶಿಕ್ಷಕರು, ಸಹಪಾಠಿಗಳ ಎದುರು ಅವಮಾನಪಡಿಸಲಾಗಿದೆ.
ನಡೆದ ಘಟನೆಯ ವಿವರವನ್ನು ವಿದ್ಯಾರ್ಥಿಯಿಂದ ತಿಳಿದು ಆಘಾತಕ್ಕೊಳಗಾದ ಪೋಷಕರು, ಇದೀಗ ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಇದೇ ಶಾಲೆಯ ಇತರೆ ವಿದ್ಯಾರ್ಥಿಗಳ ಪೋಷಕರು, ಈ ಹಿಂದೆಯೂ ಸಹ ಇಂತಹ ಘಟನೆಗಳು ನಡೆದಿವೆ. ವಿದ್ಯಾರ್ಥಿಗಳಿಗೆ ಡಸ್ಟರ್ ನೆಕ್ಕಿಸುವುದು, ತಲೆ ಕೂದಲು ಕತ್ತರಿಸುವುದು ಮೊದಲಾದವನ್ನು ಮಾಡಲಾಗಿದೆ ಎಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಇದಕ್ಕೆ ಪ್ರತಿಕ್ರಿಯಿಸಿರುವ ಮೇಘಾಲಯ ಶಿಕ್ಷಣ ಸಚಿವ ರಕ್ಕಂ ಎ ಸಂಗ್ಮಾ, ಇದೊಂದು ಅಮಾನವೀಯ ಘಟನೆಯಾಗಿದೆ. ಪ್ರಕರಣದ ಸಂಪೂರ್ಣ ವಿವರ ಕುರಿತು ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.