ಹಚ್ಚ ಹಸಿರಿನ ಹುಲ್ಲುಗಾವಲುಗಳು, ಸ್ಫಟಿಕದಂತೆ ಸ್ಪಷ್ಟವಾದ ನದಿಗಳು, ಮಂಜಿನಿಂದ ಆವೃತವಾದ ಬೆಟ್ಟಗಳು, ವೈಭವದ ಜಲಪಾತಗಳು, ಸರೋವರಗಳು ಮತ್ತು ಭವ್ಯವಾದ ಕಾಡುಗಳಿಂದ ತುಂಬಿರುವ ಮೇಘಾಲಯವು ನಿಜವಾಗಿಯೂ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದೆ.
ರಾಜ್ಯದ ಸೌಂದರ್ಯವನ್ನು ಪ್ರದರ್ಶಿಸುವ ಚಿತ್ರಗಳು ಮತ್ತು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರಾಜ್ಯದ ನೈಸರ್ಗಿಕ ಸೌಂದರ್ಯವನ್ನು ಎತ್ತಿ ತೋರಿಸುವ ಅದ್ಭುತ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಜೈನ್ತಿಯಾ ಹಿಲ್ಸ್ ಮೇಲೆ ವಿಮಾನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕಂಡು ಬಂದಿರುವ ಸುಂದರವಾದ ಜಲಪಾತದ ದೃಶ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ”ಜೈನ್ತಿಯಾ ಹಿಲ್ಸ್ ಮೇಲೆ ಹಾರುತ್ತಿರುವಾಗ ಈ ಅದ್ಭುತ ಜಲಪಾತದ ಒಂದು ಶಾಟ್ ಸಿಕ್ಕಿತು … ಇದು ಯಾವ ಜಲಪಾತ ಎಂದು ಊಹಿಸಬಹುದೆ” ಎಂದು ಬರೆದಿದ್ದಾರೆ. ಅಂದ ಹಾಗೆ ಇವರು ಶೇರ್ ಮಾಡಿರುವ ಈ ಜಲಪಾತದ ಹೆಸರು ಫೆ ಫೆ ಫಾಲ್ಸ್ (PHE PHE Falls).