ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 37 ವರ್ಷದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಗದೇ ಆಸ್ಪತ್ರೆಯಲ್ಲಿ ನರಳಾಡಿದ್ದಾರೆ. ಆಕ್ಸಿಜನ್ ವ್ಯವಸ್ಥೆ ಇಲ್ಲದೇ ಕೊನೆಯುಸಿರೆಳೆದಿದ್ದಾರೆ.
37 ವರ್ಷದ ನಾಗರಾಜ್ ಮೃತರು. ಭದ್ರಾವತಿ ತಾಲೂಕಿನ ಮಾರಶೆಟ್ಟಿಕೊಪ್ಪದ ನಾಗರಾಜ್ ಉಸಿರಾಟ ಸಮಸ್ಯೆಯಿಂದ ಮೆಗ್ಗಾನ್ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದರು. ಇಂದು ಬೆಳಿಗ್ಗೆ ಸ್ಕ್ಯಾನಿಂಗ್ ಗೆ ವಾರ್ಡ್ ನಿಂದ ಶಿಫ್ಟ್ ಮಡುವಾಗ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಉಸಿರಾಡಲು ಸಮಸ್ಯೆಯಾಗಿದೆ. ತಕ್ಷಣ ಆಕ್ಸಿಜನ್ ನೀಡುವ ಅಗತ್ಯವಿತ್ತು. ಆದರೆ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ತಕ್ಷಣ ರೋಗಿಗೆ ಆಕ್ಸಿಜನ್ ಪೂರೈಸಿಲ್ಲ. ವಾಪಸ್ ವಾರ್ಡ್ ಗೆ ಕರೆ ತಂದು ಆಕ್ಸಿಜನ್ ನೀಡಿ ಮತ್ತೆ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ರೋಗಿ ಮೃತಪಟ್ಟಿದ್ದಾರೆ.
ವೈದ್ಯರ ಬೇಜವಾಬ್ದಾರಿಗೆ ನಾಗರಾಜ್ ಸಾವನ್ನಪ್ಪಿದ್ದು, ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ನಾಗರಾಜ್ ಟೇಲರಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಾಗರಾಜ್ ಇಹಲೋಕ ತ್ಯಜಿಸಿದ್ದಾರೆ.