ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಸರ್ಕಾರದ ಪ್ರತಿನಿಧಿಗಳು, ವಿಪಕ್ಷಗಳ ನಾಯಕರು ಹಾಗೂ ಬೆಂಗಳೂರು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು, ಲಾಕ್ಡೌನ್ ಜಾರಿ ಮಾಡುವುದಾದರೆ ಪ್ರತಿ ಕುಟುಂಬಕ್ಕೆ 25 ಸಾವಿರ ರೂ. ಆರ್ಥಿಕ ನೆರವು ನೀಡುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ತಿಳಿಸಲಾಗಿದೆ. ಅವರ ತಪ್ಪುಗಳನ್ನು ಮರೆಮಾಚಲು ನಮ್ಮನ್ನು ಸಭೆಗೆ ಕರೆದಿದ್ದರು. ಸಾಂಕೇತಿಕವಾಗಿ ನಮ್ಮನ್ನು ಸಭೆಗೆ ಕರೆದಿದ್ದು, ನಮ್ಮ ಪ್ರಶ್ನೆಗಳು ಮತ್ತು ಸಲಹೆಗಳಿಗೆ ಸರ್ಕಾರದ ಬಳಿ ಉತ್ತರವಿಲ್ಲ ಎಂದು ದೂರಿದ್ದಾರೆ.
ತಜ್ಞರು ಎಚ್ಚರಿಕೆ ನೀಡಿದರೂ ಮುನ್ನೆಚ್ಚರಿಕೆ ವಹಿಸಲಿಲ್ಲ. ಲಾಕ್ಡೌನ್ ಮಾಡಬೇಡಿ ಎಂದು ಸಭೆಯಲ್ಲಿ ತಿಳಿಸಲಾಗಿದ್ದು, ಲಾಕ್ಡೌನ್ ಮಾಡಿದರೆ ಜನರ ಖಾತೆಗೆ 25 ಸಾವಿರ ರೂ. ಆರ್ಥಿಕ ನೆರವು ನೀಡಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿರುವುದಾಗಿ ಹೇಳಿದ್ದಾರೆ.