ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ನಾಳೆ ಸಚಿವರಾದ ಆರ್. ಅಶೋಕ್ ಮತ್ತು ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ನಾಳೆ ಬೆಂಗಳೂರು ನಗರ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಪ್ರಕಟಿಸುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್, ವಿಪತ್ತು ನಿರ್ವಹಣಾ ಸಮಿತಿ ಉಪಾಧ್ಯಕ್ಷರಾಗಿರುವ ಕಂದಾಯ ಸಚಿವ ಆರ್. ಅಶೋಕ್ ಅವರು ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಹೊಸ ವರ್ಷಾಚರಣೆಗೆ ಕೈಗೊಳ್ಳಬೇಕಾದ ನಿಯಮಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಬೆಂಗಳೂರು ನಗರ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಜಾರಿಗೊಳಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.