
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಜೊತೆ ವಿಡಿಯೊ ಸಂವಾದ ಮೂಲಕ ಕೋವಿಡ್ 19 ನಿಯಂತ್ರಣ ಸಂಬಂಧ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಲವು ನಿರ್ದೇಶನ ನೀಡಿದ್ದಾರೆ.
ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರೊಗೊಳಿಸಬೇಕು. ಕೋವಿಡ್ 19 ಪ್ರಕರಣ ತಡೆಯುವಲ್ಲಿ ಮೇ 12 ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈಗಾಗಲೇ ಹೊರಡಿಸಲಾಗಿರುವ ಕರ್ಫ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಲ್ಲಿ ಮಾತ್ರ ಕೋವಿಡ್ 19 ಪ್ರಕರಣಗಳು ಕಡಿಮೆಯಾಗಲು ಸಾಧ್ಯ. ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, 14 ದಿನಗಳ ಲಾಕ್‍ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಬಂದಿದ್ದು, ಅವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿರುವ ಕೋವಿಡ್ ಟಾಸ್ಕ್ ಫೋರ್ಸ್‍ಗಳನ್ನು ಬಲಪಡಿಸಬೇಕು. ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.
ಕೋವಿಡ್ ವ್ಯಾಪಕವಾಗಿ ಹರಡದಂತೆ ಕ್ರಮವಹಿಸಬೇಕು ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಗತ್ಯ ಸೌಲಭ್ಯಗಳು ಇರಬೇಕು. ರೋಗ ಲಕ್ಷಣ ಇರುವವರು ಮತ್ತು ಸಂಪರ್ಕಿತರನ್ನು ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.