ಸೌತ್ ಕೆರೊಲಿನಾ: ಜೀವ ಜಗತ್ತಿನಲ್ಲಿ ವಯಸ್ಸಿಗೂ ಪ್ರಾಮುಖ್ಯತೆ ಇದೆ. ಜೀವಿತಾವಧಿಯನ್ನು ಗುರುತಿಸಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ನಾಯಿಯ ಜೀವಿತಾವಧಿ 10 ರಿಂದ 15 ವರ್ಷ. ಕೆಲವು ತಳಿಗಳ ನಾಯಿಗಳು 18 ವರ್ಷ ಬದುಕುತ್ತವೆ. ಅವುಗಳ ಪೈಕಿ ಕೆಲವು 20ಕ್ಕೂ ಹೆಚ್ಚು ವರ್ಷ ಬದುಕಿದ್ದಿದೆ.
ಈಗ ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಕೀರ್ತಿ ಅಮೆರಿಕದ ಸೌತ್ ಕೆರೊಲಿನಾದ ಫಾಕ್ಸ್ ಟೆರಿಯರ್ ತಳಿಯ ಪೆಬಲ್ಸ್ ಪಾಲಾಗಿದೆ.
ಪೆಬಲ್ಸ್ 2000ನೇ ಇಸವಿ ಮಾರ್ಚ್ 28ರಂದು ಜನಿಸಿದೆ. ಈಕೆಗೆ ಈಗ 22 ವರ್ಷ 60 ದಿನ. ಹೊಸ ಗಿನ್ನೆಸ್ ವಿಶ್ವ ದಾಖಲೆ ಈಗ ಈಕೆಯ ಪಾಲಾಗಿದೆ. ಟೋಬಿಕೀತ್ ಎಂಬ 21 ವರ್ಷದ ಪೂಚ್ ನಾಯಿ ಹೆಸರಲ್ಲಿ ಇತ್ತು ಅತ್ಯಂತ ಹಿರಿಯ ನಾಯಿ ಎಂಬ ದಾಖಲೆ. ಈ ವಿಶ್ವ ದಾಖಲೆಗಾಗಿ ಪೆಬಲ್ಸ್ ಮಾಲೀಕರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ದಾಖಲೆ ಪೆಬಲ್ಸ್ ಹೆಸರಿಗೆ ವರ್ಗಾವಣೆ ಆಗಿದೆ.
“ಪೆಬಲ್ಸ್ ಹಗಲಿನಲ್ಲಿ ಮಲಗಲು ಇಷ್ಟಪಡುವ ಮತ್ತು ರಾತ್ರಿಯಿಡೀ ಎಚ್ಚರವಾಗಿರುವ ಕಾಡು ಹದಿಹರೆಯದವರಂತೆ” ಎಂದು ಅವಳ ಮಾಲೀಕರಾದ ಜೂಲಿ ಗ್ರೆಗೊರಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ತಿಳಿಸಿದರು.
ಪೆಬಲ್ಸ್ ನಮ್ಮ ಬದುಕಿನ ಏರಿಳಿತಗಳೊಂದಿಗೆ ಸಾಗಿ ಬಂದಿದೆ. ಒಳ್ಳೆಯ ಸಮಯದಲ್ಲೂ ಇದ್ದಳು, ಕೆಟ್ಟ ಘಳಿಗೆಯಲ್ಲೂ ಜತೆಗಿದ್ದಳು. ಆಕೆ ನಮ್ಮ ಬದುಕಿಗೆ ಉತ್ಸಾಹ ತುಂಬಿದವಳು ಎಂದು ಜೂಲಿ ಗ್ರೆಗೊರಿ ಹೇಳಿದರು.