3 ಪದ್ಮ ಪ್ರಶಸ್ತಿ ಪುರಸ್ಕೃತ ದೇಶದ ಅತ್ಯಂತ ಪ್ರಸಿದ್ಧ ಪಾಂಡವಾಣಿ ಜಾನಪದ ಕಲಾವಿದರಲ್ಲಿ ಒಬ್ಬರಾದ ಛತ್ತೀಸ್ ಗಡದ ಟೀಜನ್ ಬಾಯಿ ಪ್ರಸ್ತುತ ಅಪಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಸಾಧಾರಣ ಪ್ರತಿಭೆಯಿಂದ ಉತ್ತಮ ಯಶಸ್ಸನ್ನು ಸಾಧಿಸಿದ್ದರೂ ಜನಪದ ಕಲಾವಿದರು ಆರ್ಥಿಕ ಸಂಕಷ್ಟಕ್ಕೀಡಾಗುತ್ತಾರೆ ಎಂಬುದಕ್ಕೆ ಟೀಸನ್ ಬಾಯಿಯವರ ಸ್ಥಿತಿ ಸಾಕ್ಷಿಯಾಗಿದೆ.
78 ನೇ ವಯಸ್ಸಿನವರಾಗಿರುವ ಟೀಜನ್ ಬಾಯಿ ಅವರ ಕಲಾತ್ಮಕತೆಗೆ ಮೂರು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಆದರೂ ಅವರು ಈಗ ತಮ್ಮ ಪಿಂಚಣಿ ಪಡೆಯಲು ಹೆಣಗಾಡುತ್ತಿದ್ದಾರೆ. 2023 ರಲ್ಲಿ ತನ್ನ ಕಿರಿಯ ಮಗನ ದುರಂತ ಸಾವಿನ ನಂತರ, ಅವರು ಪಾರ್ಶ್ವವಾಯುಗೆ ತುತ್ತಾದರು. ಇದರಿಂದ ಹಾಸಿಗೆ ಹಿಡಿದ ಅವರು ಇದೀಗ ಆರೈಕೆಗಾಗಿ ತನ್ನ ಮಕ್ಕಳ ಮೇಲೆ ಅವಲಂಬಿತವಾಗಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಅವರ ಮಕ್ಕಳು ತಾಯಿಯ ಪಿಂಚಣಿಗಾಗಿ ಪ್ರಯತ್ನಿಸುತ್ತಿದ್ದಾರೆ. ಛತ್ತೀಸ್‌ಗಢದಲ್ಲಿ ಹೆಸರಾಂತ ಕಲಾವಿದರಿಗೆ ಮಾಸಿಕ ಪಿಂಚಣಿ 2,000 ರೂ. ಮತ್ತು ವೈದ್ಯಕೀಯ ನೆರವು 25,000 ರಿಂದ ರೂ. 50,000 ರೂ. ವರೆಗೆ ಹಣದ ನೆರವನ್ನು ರಾಜ್ಯದ ಸಾಂಸ್ಕೃತಿಕ ಇಲಾಖೆ ಒದಗಿಸಿದೆ. ಆದಾಗ್ಯೂ ತೀಜನ್ ಬಾಯಿ ಅವರ ಕುಟುಂಬವು ಈ ನಿಧಿಯ ಹಣಕ್ಕಾಗಿ ಇನ್ನೂ ಕಾಯುತ್ತಿದೆ.
ತೀಜನ್ ಬಾಯಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಜಪಾನ್‌ನ ಅತ್ಯುನ್ನತ ಪ್ರಶಸ್ತಿಯಾದ ಫುಕುವೋಕಾ ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರದಿದ್ದರೂ, ದೇವನಾಗರಿ ಲಿಪಿಯಲ್ಲಿ ತಮ್ಮ ಹೆಸರು ಬರೆಯುವುದನ್ನಷ್ಟೇ ಅವರು ಕಲಿತಿದ್ದರು.
1987 ರಲ್ಲಿ ಪದ್ಮಶ್ರೀ, 2003 ರಲ್ಲಿ ಪದ್ಮಭೂಷಣ ಮತ್ತು 2019 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1995 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
12 ನೇ ವಯಸ್ಸಿನಲ್ಲೇ ವಿವಾಹವಾದ ತೀಜನ್ ಬಾಯಿರನ್ನು ಪಾಂಡವಾಣಿ ಹಾಡುತ್ತಾರೆಂಬ ಕಾರಣಕ್ಕೆ ಅವರ ಮನೆಯಿಂದ ಹೊರಹಾಕಲಾಯ್ತು. ಪಾಂಡವಾಣಿ ಎಂಬುದು ಸಾಂಪ್ರದಾಯಿಕವಾಗಿ ಮಹಿಳೆಯರು ಪ್ರದರ್ಶಿಸದ ಕಲಾ ಪ್ರಕಾರವಾಗಿದೆ. ಆದರೆ ಮನೆಯಿಂದ ಹೊರಹಾಕಿದರೂ ನಿರಾಶೆಗೊಳ್ಳದೆ ಅವರು ಒಂದು ಸಣ್ಣ ಗುಡಿಸಲು ಕಟ್ಟಿಕೊಂಡು ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದರು. ನಂತರ ಪಾಂಡವಾಣಿ ಮೂಲಕ ಛತ್ತೀಸ್ ಗಡದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿದರು.