ಇನ್ಫೋಸಿಸ್ನ ಸಹ-ಸಂಸ್ಥಾಪಕ ಎಸ್.ಡಿ. ಶಿಬುಲಾಲ್ ಅವರ ಪುತ್ರಿ ಶ್ರುತಿ ಶಿಬುಲಾಲ್ ಅವರು ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ 494 ಕೋಟಿ ರೂ. ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಖರೀದಿಸಿದ್ದಾರೆ. ಬೆಂಗಳೂರು ಮೂಲದ ಐಟಿ ದೈತ್ಯದ 29,84,057 ಷೇರುಗಳನ್ನು ಅವರು ಖರೀದಿಸಿದ್ದಾರೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) ಲಭ್ಯವಿರುವ ಬ್ಲಾಕ್ ಡೀಲ್ ಮಾಹಿತಿಯ ಪ್ರಕಾರ, ಶ್ರುತಿ ಶಿಬುಲಾಲ್ ಅವರು ಪ್ರತಿ ಷೇರಿಗೆ ಸರಾಸರಿ 1,657 ರೂ. ದರದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ನಾರಾಯಣ ಮೂರ್ತಿ ಸಹ-ಸ್ಥಾಪಿಸಿದ ಇನ್ಫೋಸಿಸ್, ಮಾರ್ಚ್ 11 ರ ಹೊತ್ತಿಗೆ 6.88 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಭಾರತದ ಉನ್ನತ ಐಟಿ ಕಂಪನಿಗಳಲ್ಲಿ ಒಂದಾಗಿದೆ.
ಶ್ರುತಿ ಶಿಬುಲಾಲ್ ಅವರು ಇನ್ಫೋಸಿಸ್ನ ಪ್ರವರ್ತಕರಲ್ಲಿ ಒಬ್ಬರು. ಆಕೆಯ ತಂದೆ ಎಸ್.ಡಿ. ಶಿಬುಲಾಲ್ ಇನ್ಫೋಸಿಸ್ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ. ಶ್ರುತಿ ಶಿಬುಲಾಲ್ ಪ್ರಸ್ತುತ ತಮರಾ ಲೀಜರ್ ಎಕ್ಸ್ಪೀರಿಯೆನ್ಸಸ್ನ ಸಿಇಒ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮರಾ ದಕ್ಷಿಣ ಭಾರತದಲ್ಲಿ ರೆಸಾರ್ಟ್ಗಳು ಮತ್ತು ಹೋಟೆಲ್ಗಳನ್ನು ನಡೆಸುತ್ತದೆ ಮತ್ತು ಜರ್ಮನಿಯಲ್ಲಿಯೂ ಉದ್ಯಮಗಳನ್ನು ಹೊಂದಿದೆ. ಆಕೆಯ ತಂದೆ ಎಸ್.ಡಿ. ಶಿಬುಲಾಲ್ ಕಂಪನಿಯ ಅಧ್ಯಕ್ಷರಾಗಿದ್ದಾರೆ.
ಶ್ರುತಿ ಶಿಬುಲಾಲ್ ಅವರು ಕೊಲಂಬಿಯಾ ಬಿಸಿನೆಸ್ ಸ್ಕೂಲ್ ಪದವೀಧರೆ. ಅವರು ಆದ್ವೈತ್ ಫೌಂಡೇಶನ್ ಮತ್ತು ಎಸ್ಡಿ ಫೌಂಡೇಶನ್ನ ಟ್ರಸ್ಟಿಯಾಗಿದ್ದಾರೆ, ಈ ಸಂಸ್ಥೆಗಳು ಸಮಾಜದ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಅವಕಾಶಗಳು ಮತ್ತು ಆರೋಗ್ಯ ಸಹಾಯವನ್ನು ಒದಗಿಸುವಲ್ಲಿ ತೊಡಗಿವೆ. 40 ವರ್ಷದ ಅವರು WEP – ಮಹಿಳಾ ಶಿಕ್ಷಣ ಯೋಜನೆಯ ಟ್ರಸ್ಟಿಯೂ ಆಗಿದ್ದಾರೆ.
ಇದೇ ವೇಳೆ, ಎಸ್.ಡಿ. ಶಿಬುಲಾಲ್ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಗೌರವ್ ಮಂಚಂದ ಅದೇ ಬೆಲೆಯಲ್ಲಿ ಅದೇ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮಂಗಳವಾರ ಇನ್ಫೋಸಿಸ್ ಷೇರುಗಳು 2.02 ಪ್ರತಿಶತದಷ್ಟು ಕುಸಿದು ಎನ್ಎಸ್ಇಯಲ್ಲಿ ಪ್ರತಿ ಷೇರಿಗೆ 1,667 ರೂ. ದರದಲ್ಲಿ ವಹಿವಾಟು ಮುಗಿಸಿದವು.