ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಅನ್ನು ಮಹಿಳೆ ಕಾನ್ಸ್ಟೇಬಲ್ ಒಬ್ಬರು ಭೇದಿಸಿದ ಕುತೂಹಲದ ಘಟನೆ ನಡೆದಿದೆ.
ವಿದ್ಯಾರ್ಥಿನಿಯ ವೇಷ ತೊಟ್ಟ ರಹಸ್ಯ ಕಾರ್ಯಾಚರಣೆ ಮಾಡಿದ್ದಾರೆ 24 ವರ್ಷದ ಕಾನ್ಟೇಬಲ್ ಶಾಲಿನಿ ಚೌಹಾಣ್.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಸಹಾಯವಾಣಿಗೆ ವಿದ್ಯಾರ್ಥಿಯ ದೂರಿನ ಮೇಲೆ ಯುವ ಕಾನ್ಟೇಬಲ್ ಶಾಲಿನಿ ಚೌಹಾಣ್ ವೈದ್ಯಕೀಯ ವಿದ್ಯಾರ್ಥಿನಿಯಂತೆ ಪೋಸ್ ನೀಡಿದ್ದಾರೆ. ಮೂರು ತಿಂಗಳು ಕಾಲೇಜಿನಲ್ಲಿಯೇ ಇದ್ದಾರೆ. ನಂತರ ಆರೋಪಿಗಳ ಜಾಲ ಭೇದಿಸಿದ್ದಾರೆ. ದೂರಿನ ಆಧಾರದ ಮೇಲೆ ಸಂಸ್ಥೆಯ ಆಡಳಿತವು ಜುಲೈ 24 ರಂದು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಯುಜಿಸಿ ಸಹಾಯವಾಣಿಯಲ್ಲಿನ ದೂರಿನಲ್ಲಿ ರ್ಯಾಗಿಂಗ್ ಘಟನೆಯ ಸಂಪೂರ್ಣ ವಿವರಗಳಿವೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮೊದಲ ವರ್ಷದ ವಿದ್ಯಾರ್ಥಿಗಳನ್ನು ದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ಮಾಡುವಂತೆ ಪ್ರಚೋದಿಸಿ ರ‍್ಯಾಗಿಂಗ್ ಮಾಡಲಾಗಿತ್ತು. ಕಿರುಕುಳದ ಭಯದಿಂದ ಯಾರೂ ದೂರು ದಾಖಲು ಮಾಡಿರಲಿಲ್ಲ.
ಪೊಲೀಸರು ಕ್ಯಾಂಪಸ್‌ಗೆ ಭೇಟಿ ನೀಡಿದ್ದರು, ಆದರೆ ಸಮವಸ್ತ್ರದಲ್ಲಿರುವ ಅಧಿಕಾರಿಗಳನ್ನು ಕಂಡು ಆರೋಪಿಗಳು ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ವೇಷ ತೊಟ್ಟ ಕಾನ್ಸ್ಟೇಬಲ್ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.