ಕರಾಚಿ: ಜಗತ್ತಿನಲ್ಲಿ ಒಂದೇ ರೀತಿಯಾಗಿ ಏಳು ಮಂದಿ ಇರುತ್ತಾರೆ ಎನ್ನಲಾಗುತ್ತದೆ. ಇದು ನಿಜವೋ, ಸುಳ್ಳೋ ತಿಳಿಯದು. ಆದರೆ ಕೆಲವೊಮ್ಮೆ ಈ ಮಾತು ನಿಜವಿರಬಹುದೇ ಎಂದು ಎನ್ನಿಸುವುದು ಉಂಟು. ಅದರಲ್ಲಿಯೂ ಸಿನಿಮಾ ನಟ-ನಟಿಯರನ್ನು ಹೋಲುವ ವ್ಯಕ್ತಿಗಳನ್ನು ಕಂಡಾಗ ಅವರು ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸುವುದು ಇಂದಿನ ಟ್ರೆಂಡ್.
ಅದೇ ರೀತಿ, ನಟ ರಜನಿಕಾಂತ್ ಅವರಂತೆಯೇ ಸ್ಟೈಲ್, ಅವರಂತೆಯೇ ಲುಕ್, ಅವರಂತೆಯೇ ವಿಶಿಷ್ಟ ಶೈಲಿಯ ನಟನೆಯ ಮೂಲಕ ಸುದ್ದಿಯಾಗುತ್ತಿದ್ದಾರೆ ಪಾಕಿಸ್ತಾನ ಮೂಲದ 62 ವರ್ಷದ ನಿವೃತ್ತ ಸರ್ಕಾರಿ ನೌಕರ ರೆಹಮತ್ ಗಶ್ಕೋರಿ. ಇವರು ನಟ ರಜನಿ ಕಾಂತ್ ಅವರ ಹೋಲಿಕೆಯನ್ನು ಹೊಂದಿದ್ದು ಇವರ ನಟನೆಯ ಕೆಲವೊಂದಿಷ್ಟು ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಗೆ ಬರುತ್ತಿದ್ದಾರೆ.
ಸಿಬಿಯಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ, ನಾನು ನನ್ನ ಲುಕ್ ಒಬ್ಬ ಮಹಾನ್ ನಟನನ್ನು ಹೋಲುತ್ತಿದೆ ಎಂಬುದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನನ್ನ ನಿವೃತ್ತಿಯ ನಂತರ ನನ್ನನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಂಡೆ. ನಂತರದ ದಿನಗಳಲ್ಲಿ ಜನರು ನನ್ನನ್ನು ಗುರುತಿಸತೊಡಗಿದರು. ಹೆಚ್ಚಾಗಿ ರಜನಿಕಾಂತ್ ಅಭಿಮಾನಿಗಳು ನನಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅರಬ್ ನ್ಯೂಸ್‌ನ ಸಂದರ್ಶನದಲ್ಲಿ ಇವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇವರ ಜತೆ ಸೆಲ್ಫೀ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.