ಕೊರೊನಾ ಕಾರಣದಿಂದಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಶಾಲೆಗಳು ಮುಚ್ಚಿದ್ದವು. ಇದರಿಂದ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳ ಓದಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ರಾಜಸ್ಥಾನದ ಜೋಧಪುರದಲ್ಲಿ ಒಂಟೆ ಗಾಡಿಯ ಮೇಲೆ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಇದೊಂದು ಚಲಿಸುವ ಗ್ರಂಥಾಲಯವಾಗಿದ್ದು ಮರುಭೂಮಿ ಪ್ರದೇಶದ ಹಳ್ಳಿ ಹಳ್ಳಿಗೆ ಸಂಚರಿಸುತ್ತಿದೆ.
ರಾಜಸ್ಥಾನದ ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ಚಲಿಸುವ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಈ ಗ್ರಂಥಾಲಯವನ್ನು ಬಲೂನುಗಳಿಂದ ಅಲಂಕರಿಸಲಾಗಿದೆ. ಹಾಗೂ ಈ ಒಂಟೆ ಗ್ರಂಥಾಲಯದಲ್ಲಿ 1500ಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ.
ಶಾಲಾ ಶಿಕ್ಷಣದ ಜಂಟಿ ನಿರ್ದೇಶಕ ಪ್ರೇಮ್ ಚಂದ್ ಸಖ್ಲಾ ಈ ವಿಚಾರವಾಗಿ ಮಾತನಾಡಿದ್ದು ಎನ್ಜಿಓ ಒಂದರ ಸಹಾಯದಿಂದ ಅಂತಾರಾಷ್ಟ್ರೀಯ ಓದುವ ಅಭಿಯಾನ 2021ರ ಅಡಿಯಲ್ಲಿ ಈ ವಿಶೇಷವಾದ ಗ್ರಂಥಾಲಯವು ಸ್ಥಾಪನೆಯಾಗಿದೆ. ಆನ್ಲೈನ್ ತರಗತಿಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂಟೆ ಬಂಡಿಯ ಮೇಲೆ ಗ್ರಂಥಾಲಯ ನಿರ್ಮಿಸಲಾಗಿದೆ. ಎಂತಹ ಕಠಿಣ ಸ್ಥಿತಿಯಲ್ಲೂ ಮಕ್ಕಳು ಓದು ನಿಲ್ಲಿಸಬಾರದು ಅನ್ನೋದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ್ರು.