ಸಣ್ಣದೊಂದು ಅಂಗಡಿಯಲ್ಲಿ ಆರಂಭಗೊಂಡು ದೇಶವಾಸಿಗಳ ಪ್ರೀತಿಗೆ ಪಾತ್ರವಾಗಿರುವ ಅನೇಕ ಬ್ರಾಂಡುಗಳು ಭಾರತದಲ್ಲಿವೆ. ಆರಂಭಿಕ ದಿನಗಳಲ್ಲಿ ಹಣ ಹೊಂದಿಸಲು ಭಾರೀ ಕಷ್ಟಪಟ್ಟ ವರ್ತಕರು, ತಮ್ಮ ಉದ್ಯಮದಲ್ಲಿ ಶ್ರದ್ಧೆ ಹಾಗೂ ನಿರಂತರ ಶ್ರಮಗಳ ಮೂಲಕ ಇಂದು ಪ್ರತಿನಿತ್ಯ ಲಕ್ಷಾಂತರ/ಕೋಟ್ಯಂತರ ರೂಪಾಯಿಗಳ ವಹಿವಾಟು ಮಾಡುತ್ತಿರುವ ನಿದರ್ಶನಗಳು ನಮ್ಮ ಮುಂದೆ ಇವೆ.
ಇಂಥ ಒಂದು ನಿದರ್ಶನ ನ್ಯಾಚುರಲ್ಸ್ ಐಸ್‌ಕ್ರೀಂ ನ ರಘುನಂದನ್ ಶ್ರೀನಿವಾಸ್ ಕಾಮತ್‌ರದ್ದು.
1984ರಲ್ಲಿ ನ್ಯಾಚುರಲ್ಸ್ ಐಸ್ ಕ್ರೀಂ ಸ್ಥಾಪಿಸಿದ ರಘುನಂದನ್, ಮುಂಬೈನ ಜುಹುವಿನಲ್ಲಿ ಮೊದಲ ಸ್ಟೋರ್ ತೆರೆದರು. ಕರ್ನಾಟಕದಲ್ಲಿ ರಘುನಂದನ್‌ರ ತಂದೆ ಮಾವಿನ ಹಣ್ಣಿನ ವ್ಯಾಪಾರಿಯಾಗಿದ್ದರು. ಮಂಗಳೂರಿನ ಬಳಿಯ ಪುಟ್ಟ ಗ್ರಾಮವೊಂದರಲ್ಲಿ ತಮ್ಮ ತಂದೆಯ ವ್ಯಾಪಾರಕ್ಕೆ ನೆರವಾಗಿದ್ದರು ರಘುನಂದನ್.
ಇದಾದ ಬಳಿಕ ಮಂಗಳೂರಿನಿಂದ ಬಾಂಬೆಗೆ ತೆರಳಿದ ರಘುನಂದನ್, ಫೆಬ್ರವರಿ 14, 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಸ್ಥಾಪಿಸಿದರು. 10 ಐಸ್‌ಕ್ರೀಂ ಫ್ಲೇವರ್‌ಗಳನ್ನು ನಾಲ್ಕು ಸಹಾಯಕರೊಂದಿಗೆ ಗ್ರಾಹಕರಿಗೆ ಒದಗಿಸುತ್ತಿದ್ದರು ರಘುನಂದನ್. ಆದರೆ ಐಸ್‌ಕ್ರೀಂಗೆ ಅಷ್ಟೆಲ್ಲಾ ಗ್ರಾಹಕರು ಬರುವರೋ ಎಂಬ ಖಾತ್ರಿ ಇಲ್ಲದೇ ಇದ್ದರಿಂದ ಪಾವ್-ಭಾಜಿಯನ್ನು ಸಹ ಜೊತೆಯಲ್ಲಿ ಉಣಬಡಿಸುತ್ತಿದ್ದರು ಕಾಮತ್.
ಮುಂದಿನ ದಶಕಗಳಲ್ಲಿ ಹಂತಹಂತವಾಗಿ ಬೆಳೆಯುತ್ತಾ ಸಾಗಿದ ರಘುನಂದನ್, 2020ರ ವೇಳೆಗೆ 300 ಕೋಟಿ ಟರ್ನ್‌ಓವರ್ ಇರುವ ಐಸ್‌ಕ್ರೀಂ ಬ್ರ‍್ಯಾಂಡ್ ಮಾಲೀಕರಾಗಿದ್ದರು. ಕೆಪಿಎಂಜಿ ಸರ್ವೇಯಲ್ಲಿ, ದೇಶದ ಗ್ರಾಹಕರ ವಿಶ್ವಾಸ ಗಳಿಸಿದ ಅಗ್ರ 10 ಬ್ರ‍್ಯಾಂಡ್‌ಗಳಲ್ಲಿ ನ್ಯಾಚುರಲ್ಸ್ ಐಸ್‌ಕ್ರೀಂ ಸಹ ಒಂದಾಗಿದೆ.