ಬಾಲಿವುಡ್ ನ 12th ಫೇಲ್ ಸಿನಿಮಾ ಸ್ಫೂರ್ತಿದಾಯಕ ಕಥೆಯಾಗಿದೆ. 12th ಫೇಲ್ ನಂತೆಯೇ ಇದು 11th ಫೇಲ್ ಯಶಸ್ಸಿನ ಕಥೆ. 12th ರೀಲ್ ಹೀರೋ ಪಯಣವಾದರೆ, 11thಫೇಲ್ ರಿಯಲ್ ಹೀರೋಯಿನ್ ಪಯಣವಾಗಿದೆ.
11ನೇ ತರಗತಿಯಲ್ಲಿ ಅನುತ್ತೀರ್ಣಳಾದ ರೈತನ ಮಗಳು ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪರೀಕ್ಷೆಯಲ್ಲಿ ಆರನೇ ಸ್ಥಾನ ಪಡೆಯುವ ಮೂಲಕ ಡೆಪ್ಯೂಟಿ ಕಲೆಕ್ಟರ್ ಆಗಿರುವ ಯಶಸ್ಸಿನ ಕಥೆ ಇದು.
ಡೆಪ್ಯುಟಿ ಕಲೆಕ್ಟರ್ ಪ್ರಿಯಾಲ್ ಯಾದವ್ ಅವರ ಕಥೆಯು ನಿಜವಾಗಿಯೂ ಸ್ಫೂರ್ತಿ ನೀಡುತ್ತದೆ, ಸಾಕಷ್ಟು ಬದ್ಧತೆ ಮತ್ತು ದೃಢತೆಯಿಂದ ಕಠಿಣವಾದ ಅಡೆತಡೆಗಳನ್ನು ಜಯಿಸಬಹುದು ಎಂದು ತೋರಿಸುತ್ತದೆ.
ತಮ್ಮ ಯಶಸ್ಸಿನ ಪುಸ್ತಕದ ಪುಟಗಳನ್ನು ತಿರುವಿಹಾಕಿದ ಅವರು “ನಾನು 10 ನೇ ತರಗತಿಯವರೆಗೆ ಕ್ಲಾಸ್ ಟಾಪರ್ ಆಗಿದ್ದೆ. ಆದರೆ ಸಂಬಂಧಿಕರ ಒತ್ತಡದಿಂದಾಗಿ ಸೈನ್ಸ್ ನಲ್ಲಿ ಆಸಕ್ತಿ, ಜ್ಞಾನ ಇಲ್ಲದಿದ್ದರೂ ನಾನು 11 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಆರಿಸಿಕೊಂಡೆ. ಆದರೆ ಭೌತಶಾಸ್ರ್ಕದಲ್ಲಿ ಫೇಲ್ ಆದೆ ಎಂದು 27 ವರ್ಷದ ಪ್ರಿಯಾಲ್ ಯಾದವ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 11ನೇ ತರಗತಿಯಲ್ಲಿ ಫೇಲ್ ಆಗಿದ್ದೇ ನನ್ನ ಶೈಕ್ಷಣಿಕ ಜೀವನದಲ್ಲಿ ಪ್ರಥಮ ಮತ್ತು ಕೊನೆಯ ವೈಫಲ್ಯ ಎಂದು ತಿಳಿಸಿದ್ದಾರೆ.
ಪ್ರಿಯಾಲ್ ಯಾದವ್ ಅವರು 2019 ರಲ್ಲಿ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (MPPSC) ಪರೀಕ್ಷೆಯಲ್ಲಿ 19 ನೇ ರ್ಯಾಂಕ್ ಗಳಿಸಿ ಜಿಲ್ಲಾ ರಿಜಿಸ್ಟ್ರಾರ್ ಹುದ್ದೆಗೆ ಆಯ್ಕೆಯಾದರು. 2020 ರಲ್ಲಿ ಅವರ ಮುಂದಿನ ಪ್ರಯತ್ನದಲ್ಲಿ 34 ನೇ ಶ್ರೇಣಿ ಪಡೆದು ಸಹಕಾರಿ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾದರು. ಪ್ರಸ್ತುತ ಇಂದೋರ್‌ನಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಆಗಿ ಪೋಸ್ಟ್ ಮಾಡಲಾಗಿದೆ. MPPSC ಪರೀಕ್ಷೆ 2021 ರಲ್ಲಿ ಅವರು ಆರನೇ ರ್ಯಾಂಕ್ ಗಳಿಸಿದ್ದು ಅದರ ಫಲಿತಾಂಶಗಳನ್ನು ಗುರುವಾರ ಸಂಜೆ ಘೋಷಿಸಲಾಗಿದೆ.
ಪ್ರಿಯಾಲ್ ಯಾದವ್ ತಂದೆ ಕೃಷಿಕರಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ತಮ್ಮ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾತನಾಡುತ್ತಾ, “ನಾನು ಗ್ರಾಮೀಣ ಪ್ರದೇಶದಿಂದ ಬಂದವಳು, ಅಲ್ಲಿ ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆದರೆ ನನ್ನ ಪೋಷಕರು ನನ್ನನ್ನು ಮದುವೆಯಾಗುವಂತೆ ಒತ್ತಡ ಹೇರಲಿಲ್ಲ ಬದಲಾಗಿ ನನ್ನ ಅಧ್ಯಯನವನ್ನು ಮುಂದುವರಿಸಲು ನನಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದರು” ಎಂದು ಈಗ ಐಎಎಸ್ ಅಧಿಕಾರಿಯಾಗುವತ್ತ ದೃಷ್ಟಿ ನೆಟ್ಟಿರುವ ಪ್ರಿಯಾಲ್ ಹೇಳಿದರು. ರಾಜ್ಯದಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಅವರು ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ಮುಂದಾಗಿದ್ದಾರೆ.