ಸಾಮಾನ್ಯವಾಗಿ ಯಾವುದೇ ಉದ್ಯೋಗದಲ್ಲಿರುವವರು, ಉದ್ಯಮದಲ್ಲಿರುವವರು ತಮ್ಮ 55-60ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ಉದ್ಯಮಿಗಳು, ತುಂಬ ದುಡಿದವರು, ತುಂಬ ದಣಿದವರು 45-50 ವರ್ಷಕ್ಕೆ ನಿವೃತ್ತರಾಗುವುದು ಹೊಸ ರೂಢಿಯೂ ಆಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ 11 ವರ್ಷದ ಬಾಲಕಿಯು 15ನೇ ವಯಸ್ಸಿನಲ್ಲಿಯೇ ನಿವೃತ್ತಿ ಹೊಂದಲು ತೀರ್ಮಾನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಕಳೆದ ವರ್ಷ ತಾಯಿಯ ಜತೆಗೂಡಿ ಪಿಕ್ಸೀ ಕರ್ಟಿಸ್ ಎಂಬ ಬಾಲಕಿಯು ಮಕ್ಕಳ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಉದ್ಯಮ ಆರಂಭಿಸಿದ್ದಾಳೆ. ಪಿಕ್ಸೀಸ್ ಪಿಡ್ಜೆಟ್ಸ್ ಎಂಬುದು ಆಕೆಯ ಕಂಪನಿಯ ಹೆಸರಾಗಿದ್ದು, ಒಂದೇ ವರ್ಷದಲ್ಲಿ ತಾಯಿ-ಮಗಳು ಸೇರಿ ಕೋಟ್ಯಂತರ ರೂಪಾಯಿ ದುಡಿದಿದ್ದಾರೆ. ಹೀಗೆಯೇ ಉದ್ಯಮ ಲಾಭದತ್ತ ಸಾಗುತ್ತದೆ ಎಂಬುದು ಬಾಲಕಿಯ ವಿಶ್ವಾಸವಾಗಿದೆ. ಈಗ 11 ವರ್ಷದವಳಾಗಿರುವ ಬಾಲಕಿ 15 ವರ್ಷಕ್ಕೇ ನಿವೃತ್ತಿ ತೆಗೆದುಕೊಳ್ಳಲು ತೀರ್ಮಾನಿಸಿದ್ದಾಳೆ.
ಮಗಳ ನಿರ್ಧಾರಕ್ಕೆ ತಾಯಿಯ ಬೆಂಬಲವೂ ಇದೆ. ಈಗಾಗಲೇ ನನ್ನ ಮಗಳು ಸಾಕಷ್ಟು ದುಡಿದಿದ್ದಾಳೆ. 11ನೇ ವಯಸ್ಸಿಗೇ ಉದ್ಯಮಿ ಎನಿಸಿದ್ದಾಳೆ. ಹಾಗಾಗಿ, ಇನ್ನೂ ನಾಲ್ಕು ವರ್ಷಕ್ಕೆ ನಿವೃತ್ತಳಾಗಿ ಓದು, ಅಧ್ಯಯನ, ಪ್ರವಾಸ ಮಾಡಿಕೊಂಡಿರಲಿ. ಆಕೆಯ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಪಿಕ್ಸೀ ತಾಯಿ ರಾಕ್ಸಿ ಜೆಸೆಂಕೋ ಹೇಳಿದ್ದಾರೆ. ಒಟ್ಟಿನಲ್ಲಿ 60 ನೇ ವಯಸ್ಸಿನ ತನಕ ದುಡಿದು ದುಡಿದು ನಿವೃತ್ತರಾಗಿ, ಪಿಂಚಣಿಗೆ ಕಾಯುವವರ ಮಧ್ಯೆ, 15ನೇ ವರ್ಷಕ್ಕೇ ಕೋಟ್ಯಂತರ ರೂ. ದುಡಿದು, ಉಳಿದ ಜೀವನವನ್ನು ಹಲವು ಚಟುವಟಿಕೆಗಳಿಗೆ ಮೀಸಲಿಡಲು ತೀರ್ಮಾನಿಸಿದ ಬಾಲಕಿಯ ನಡೆಯು ಅಚ್ಚರಿ ಜತೆಗೆ ಸಮಂಜಸವೂ ಎನಿಸುತ್ತಿದೆ. ಅಷ್ಟಕ್ಕೂ, ದುಡ್ಡಿನ ಗೋಜಿಲ್ಲದೆ, ಒತ್ತಡವೇ ಇಲ್ಲದ ಜೀವನ ಯಾರಿಗೆ ತಾನೆ ಬೇಡ?