ಕೇವಲ 21 ವರ್ಷದವರಾಗಿದ್ದಾಗ ಗ್ರಾಮವೊಂದನ್ನ ದತ್ತು ತೆಗೆದುಕೊಂಡ ಯುವಕ ಇದೀಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುತ್ತಾರೆ. ಅವರೇ ಉತ್ತರ ಪ್ರದೇಶದ ಗಾಜಿಪುರದ ಬೀರ್‌ಪುರ್ ಗ್ರಾಮದ ನಿವಾಸಿ ನವೀನ್ ಕೃಷ್ಣ ರೈ . ತಮ್ಮ ಬುದ್ಧಿವಂತಿಕೆ ಹಾಗು ಸಮಾಜ ಸೇವಾ ಕಾರ್ಯಗಳಿಂದ ನವೀನ್ ಕೃಷ್ಣ ರೈ ಬೀರ್ ಪುರ್ ಗ್ರಾಮದಲ್ಲಿ ಹೆಸರುವಾಸಿಯಾಗಿದ್ದಾರೆ.
ಪ್ರಸ್ತುತ ನವೀನ್ ಐಐಎಂ ಇಂದೋರ್‌ನಲ್ಲಿ ಸರ್ಕಾರಿ ವ್ಯವಹಾರಗಳು ಮತ್ತು ವ್ಯವಹಾರ ಅಭಿವೃದ್ಧಿಯ ವ್ಯವಸ್ಥಾಪಕರಾಗಿದ್ದಾರೆ. ಆದಾಗ್ಯೂ ನವೀನ್ ತಮ್ಮ ತವರು ಜಿಲ್ಲೆಯಲ್ಲಿ ನಡೆಸಿರುವ ಚಟುವಟಿಕೆಗಳಿಗೆ ಖ್ಯಾತಿ ಗಳಿಸಿದ್ದು ಪ್ರಸ್ತುತ ಅವರು ಕೆಲಸ ಮಾಡುತ್ತಿರುವ IIM ಇಂದೋರ್ ಸೇರಿದಂತೆ ಅನೇಕ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.
ನವೀನ್ ಕೃಷ್ಣ ಆರಂಭದಲ್ಲೇ ಕಷ್ಟದ ಜೀವನ ಅನುಭವಿಸಿದ್ದರು. ಅವರು ಹುಟ್ಟುವ ಕೆಲ ತಿಂಗಳ ಮುನ್ನವಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ಗಾಜಿಪುರದ ಬೀರ್‌ಪುರ್‌ನಲ್ಲಿ ಜನಿಸಿದ ಅವರನ್ನು ತಾಯಿ ಸಾಕಿದ್ದರು. ಆರಂಭದಲ್ಲಿ ಪ್ರಯಾಗ್‌ರಾಜ್‌ನ ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪಡೆದು 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣವನ್ನು ಪಡೆದರು. ನಂತರ ಅವರು ಗೋರಖ್‌ಪುರದ ಮದನ್ ಮೋಹನ್ ಮಾಳವೀಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿಯನ್ನು ಪಡೆದರು.
ನವೀನ್ ಬಿ.ಟೆಕ್ ವ್ಯಾಸಂಗದ ಸಮಯದಲ್ಲಿ ಸಾಮಾಜಿಕ ಕಾರ್ಯಗಳಿಗೆ ಮುಂದಾದರು. 2015 ರಲ್ಲಿ ಆಗಿನ ಗೋರಖ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ರಂಜನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಗೋರಖ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಲ್ಲಿ ನಾಯಕತ್ವ ಕೌಶಲ್ಯವನ್ನು ಬೆಳೆಸಲು ‘ಗ್ರಾಮೀಣ ಯುವ ನಾಯಕತ್ವ ಕಾರ್ಯಕ್ರಮ’ವನ್ನು ಪ್ರಾರಂಭಿಸಿದರು.
ಆಯುಕ್ತ ಪಿ ಗುರುಪ್ರಸಾದ್ ಅವರೊಂದಿಗೆ ಸಹಕರಿಸಿದ ನವೀನ್ ಖೋರಬಾರ್ ಬ್ಲಾಕ್‌ನಲ್ಲಿರುವ ಮೋತಿರಾಮ್ ಅಡ್ಡಾ ಗ್ರಾಮವನ್ನು ದತ್ತು ಪಡೆದರು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದರು.
ಬಳಿಕ ಔಪಚಾರಿಕ ನಿರ್ವಹಣಾ ಪದವಿಯ ಕೊರತೆಯ ಹೊರತಾಗಿಯೂ ನವೀನ್ ಸರ್ಕಾರಿ ಅಧಿಕಾರಿಗಳಿಗೆ ನಿರ್ವಹಣೆ (Manageent) ಯನ್ನು ಕಲಿಸುವಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದರು. ಅವರ ಪರಿಣತಿಯು ಅರೆಸೈನಿಕ ಪಡೆಗಳು, ಪೊಲೀಸ್ ಮತ್ತು ನ್ಯಾಯಾಂಗ ಸೇವೆಗಳು ಸೇರಿದಂತೆ ವಿವಿಧ ರಾಜ್ಯ ತರಬೇತಿ ಅಕಾಡೆಮಿಗಳಲ್ಲಿ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ನಿರ್ವಹಣಾ ವಿಷಯಗಳ ಕುರಿತು ತರಬೇತಿ ನೀಡಲು ಕಾರಣವಾಯಿತು.
IRS, ರಾಜ್ಯ ಪೊಲೀಸ್ ಸೇವೆ, ಆಡಳಿತ ಸೇವೆ ಮತ್ತು ಕೇಂದ್ರ ಮೀಸಲು ಪಡೆಗಳಲ್ಲಿ ಸಾವಿರಾರು ಅಧಿಕಾರಿಗಳಿಗೆ ನಿರ್ವಹಣಾ ತರಬೇತಿಯನ್ನು ನವೀನ್ ನೀಡಿದ್ದಾರೆ.
ತಮ್ಮ ಜ್ಞಾನ ಮತ್ತು ಪರಿಣತಿಗಾಗಿ ಗುರುತಿಸಲ್ಪಟ್ಟ ನವೀನ್, ರಾಜ್ಯಗಳಾದ್ಯಂತ ವಿವಿಧ ಸರ್ಕಾರಿ ಸಮಿತಿಗಳಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.