ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್ ಚಾಲಕಿ 03-11-2022 2:42PM IST / No Comments / Posted In: Karnataka, Latest News, Live News ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ ಪಡುವ ನೋವು, ಕಷ್ಟಗಳು ಅಷ್ಟಿಷ್ಟಲ್ಲ. ಆದರೆ ಕೆಲವೊಂದು ಉದ್ಯೋಗದಲ್ಲಿ ಆಕೆ ಎಲ್ಲಾ ನೋವನ್ನು ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡು ಹೊರಗಡೆ ಹಸನ್ಮುಖಿಯಾಗಿರಬೇಕಾದ ಅನಿವಾರ್ಯತೆ. ಈಗ ವೈರಲ್ ಆಗಿರುವ ವಿಡಿಯೋ ಒಂದನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಬೆಂಗಳೂರಿನ ಮಹಿಳಾ ಉಬರ್ ಡ್ರೈವರ್ ಪಕ್ಕದಲ್ಲಿ ತನ್ನ ಮಗುವನ್ನು ಮಲಗಿಸಿಕೊಂಡು ಕಾರು ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದೆ. ಕ್ಲೌಡ್‌ಸೆಕ್ ಕಂಪೆನಿಯ ಸಹಸಂಸ್ಥಾಪಕ ರಾಹುಲ್ ಸಾಸಿ ಎನ್ನುವವರು ಲಿಂಕಡಿನ್ನಲ್ಲಿ ಈ ಕಥೆ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದಿಷ್ಟು: ‘ನಿನ್ನೆ ನನ್ನ ಸ್ನೇಹಿತ ನನಗಾಗಿ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಆಗ ಮಹಿಳಾ ಡ್ರೈವರ್ ಪಿಕ್ ಮಾಡಿದರು. ಸ್ವಲ್ಪ ದೂರ ಪ್ರಯಾಣ ಸಾಗುತ್ತಿದ್ದಂತೆ ಡ್ರೈವರ್ ಸೀಟಿನ ಪಕ್ಕ ಮಗುವೊಂದು ಮಲಗಿರುವುದು ಕಂಡಿತು. ಮೇಡಮ್ ಇದು ನಿಮ್ಮ ಮಗಳೇ ಎಂದು ಕೇಳಿದೆ. ಅದಕ್ಕೆ ಆಕೆ, ಹೌದು ಸರ್ ಶಾಲೆಗೆ ರಜೆ ಇರೋದ್ರಿಂದ ಕರೆದುಕೊಂಡು ಬಂದಿದ್ದೇನೆ ಎಂದರು. ತಮ್ಮ ಹೆಸರನ್ನು ನಂದಿನಿ ಎಂದು ಹೇಳಿಕೊಂಡ ಅವರು, ಉದ್ಯಮಿಯಾಗಬೇಕು ಎಂಬ ಕನಸು ಕಂಡಿದ್ದರಿಂದ ತಮ್ಮ ಉಳಿತಾಯದ ಹಣದಿಂದ ಒಂದು ಫುಡ್ ಟ್ರಕ್ ಶುರುಮಾಡಿದರು. ಆದರೆ ಕೋವಿಡ್ ಪರಿಣಾಮದಿಂದ ಅವರು ನಷ್ಟ ಅನುಭವಿಸಿದರು. ಕಳೆದುಕೊಂಡ ಹಣವನ್ನು ಮರುಹೊಂದಿಸುವುದು ಅನಿವಾರ್ಯವಾದ ಕಾರಣ ಉಬರ್ ಡ್ರೈವರ್ ಕೆಲಸಕ್ಕೆ ಸೇರಿರುವುದಾಗಿ ಹೇಳಿದರು ಎಂದು ರಾಹುಲ್ ಬರೆದಿದ್ದಾರೆ. ಇದನ್ನು ಓದಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ.