ಅನಂತ್ ಅಂಬಾನಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆ ಮುಂಚಿನ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಸ್ನೇಹಿತರು ಬರ್ತಿದ್ದಾರೆ. ಅದ್ರಲ್ಲಿ ಮುಖೇಶ್ ಅಂಬಾನಿ ಸಹೋದರಿ ದೀಪ್ತಿ ಹಾಗೂ ಅವರ ಪತಿ ದತ್ತರಾಜ್ ಕೂಡ ಸೇರಿದ್ದಾರೆ. ಅನೇಕರಿಗೆ ಇವರ ಬಗ್ಗೆ ತಿಳಿದಿಲ್ಲ.
ಮುಕೇಶ್ ಅಂಬಾನಿಯವರ ಬಾಲ್ಯದ ಗೆಳೆಯ ದತ್ತರಾಜ್ ಸಲ್ಗಾಂವ್ಕರ್ ಮತ್ತು ಅಂಬಾನಿಯ ಕಿರಿಯ ಸಹೋದರಿ ದೀಪ್ತಿ ಪ್ರೀತಿಸಿ ಮದುವೆ ಆಗಿದ್ದಾರೆ. ಮುಂಬೈನ ಮೊದಲ ಗಗನಚುಂಬಿ ಕಟ್ಟಡ ಉಷಾ ಕಿರಣ್ ದಲ್ಲಿ ಇವರಿಬ್ಬರ ಪ್ರೀತಿ ಶುರುವಾಗಿತ್ತು. ದೀಪ್ತಿ ಅಂಬಾನಿ 22ನೇ ಮಹಡಿಯಲ್ಲಿ ವಾಸವಾಗಿದ್ದರೆ, ದತ್ತರಾಜ್ ಸಲಗಾಂವ್ಕರ್ 14ನೇ ಮಹಡಿಯಲ್ಲಿದ್ದರು.
ದತ್ತರಾಜ್ ಸಲ್ಗಾಂವ್ಕರ್ ಅವರ ತಂದೆ, ವಿ ಎಂ ಸಲಗಾಂವ್ಕರ್ ಗ್ರೂಪ್ ಆಫ್ ಕಂಪನಿಗಳ ಸಂಸ್ಥಾಪಕ ಮತ್ತು ಅಧ್ಯಕ್ಷರಾದ, ವಾಸುದೇವ್ ಸಲ್ಗಾಂವ್ಕರ್ ಅಕಾಲಿಕ ನಿಧನದ ನಂತ್ರ ಅಂಬಾನಿ ಕುಟುಂಬದ ಕುಲಪತಿ ಮತ್ತು ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರು ಯುವ ಸಲಗಾಂವ್ಕರ್‌ಗೆ ಮಾರ್ಗದರ್ಶಕರಾದರು. ಧೀರೂಭಾಯಿ ಮತ್ತು ವಾಸುದೇವ್ ಅವರು ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ದತ್ತರಾಜ್ ಸಲ್ಗಾಂವ್ಕರ್, ಅಂಬಾನಿ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇದರಿಂದ ಇಬ್ಬರು ಅಂಬಾನಿ ಪುತ್ರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಯೊಂದಿಗೆ ನಿಕಟವಾದ ಸ್ನೇಹ ಬೆಳೆಯಿತು. ಜೊತೆಗೆ ದೀಪ್ತಿ ಅಂಬಾನಿ ಮೇಲೆ ಪ್ರೀತಿ ಚಿಗುರಿತ್ತು.
ಮನೆಯವರ ಒಪ್ಪಿಗೆ ಪಡೆದು 1983 ರಲ್ಲಿ ದತ್ತರಾಜ್ ಸಲ್ಗಾಂವ್ಕರ್ ಮತ್ತು ದೀಪ್ತಿ ಮದುವೆ ನಡೆಯಿತು. ದತ್ತರಾಜ್ ಸಲ್ಗಾಂವ್ಕರ್ ಮತ್ತು ದೀಪ್ತಿ ಸಲ್ಗಾಂವ್ಕರ್ ಜನವರಿ 1984 ರಲ್ಲಿ ಗೋವಾಕ್ಕೆ ತೆರಳಿದರು. ನವವಿವಾಹಿತರು ದಾಬೋಲಿಮ್ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಚಿಕಾಲಿಮ್‌ನಲ್ಲಿರುವ ಪೂರ್ವಜರ ಮನೆಯಲ್ಲಿ ವಾಸ ಶುರು ಮಾಡಿದ್ದರು. ವಾಸ್ತುಶಿಲ್ಪಿ ರಾಲಿನೊ ಸೌಜಾ ವಿನ್ಯಾಸಗೊಳಿಸಿರುವ ಈ ಮಹಲು ಆಕರ್ಷಕವಾಗಿದೆ. ದಂಪತಿ ಉತ್ತರದಲ್ಲಿರುವ ಕ್ಯಾಂಡೋಲಿಮ್‌ನಲ್ಲಿ ಬೀಚ್-ಫೇಸಿಂಗ್ ಹೌಸ್ ಅನ್ನು ಹೊಂದಿದ್ದಾರೆ. ಪಂಜಿಮ್ ಬಳಿಯ ಡೊನಾ ಪೌಲಾದಲ್ಲಿ ಮತ್ತೊಂದು ಮನೆ ಹೊಂದಿದ್ದಾರೆ. 1974 ರಲ್ಲಿ, ಸಲ್ಗಾಂವ್ಕರ್ಸ್, V M ಸಲಗಾಂವ್ಕರ್ ಕಾರ್ಪೊರೇಷನ್ ಬ್ಯಾನರ್ ಅಡಿಯಲ್ಲಿ ಸಲ್ಗಾಂವ್ಕರ್ ಕ್ರಿಕೆಟ್ ಕ್ಲಬ್ ಅನ್ನು ಶುರು ಮಾಡಿದ್ದರು. ಇಂದಿಗೂ ಅದರ ಹೆಮ್ಮೆಯ ಮಾಲೀಕರಾಗಿ ಉಳಿದಿದ್ದಾರೆ. . ಸಲ್ಗಾಂವ್ಕರ್ ಅವರು 1994 ರಿಂದ 1997 ರವರೆಗೆ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.