ಬ್ರೆಜಿಲ್‌ನ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು ಮರಿಯಾ ಡಿ ಸೌಸಾ ಡಿನೋ ದಂಪತಿ ತಮ್ಮ 84 ವರ್ಷಗಳ ದಾಂಪತ್ಯ ಜೀವನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಈ ಸುದೀರ್ಘ ಮತ್ತು ಸಂತೋಷದಾಯಕ ದಾಂಪತ್ಯಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಅವರ ಹೆಸರು ದಾಖಲಾಗಿದೆ. ಈ ದಂಪತಿಗೆ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿ ಮೊಮ್ಮಕ್ಕಳು ಮತ್ತು 12 ಮರಿ ಮರಿ ಮೊಮ್ಮಕ್ಕಳು ಸೇರಿದಂತೆ ಒಂದು ದೊಡ್ಡ ಕುಟುಂಬವಿದೆ.
ಅವರ ಪ್ರೇಮಕಥೆ 1936 ರಲ್ಲಿ ಪ್ರಾರಂಭವಾಯಿತು. ಮನೋಯೆಲ್ (ಜನನ 1919) ಮತ್ತು ಮರಿಯಾ (ಜನನ 1923) ಕೃಷಿಯಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ಮನೋಯೆಲ್ ಬ್ರೆಜಿಲ್‌ನ ಜನಪ್ರಿಯ ಕಬ್ಬಿನ ಮಿಠಾಯಿ ರಾಪದುರಾಗಳನ್ನು ಸಂಗ್ರಹಿಸಲು ಅಲ್ಮೇಡಾ ಪ್ರದೇಶಕ್ಕೆ ಹೋಗಿದ್ದರು, ಅಲ್ಲಿ ಅವರು ಮರಿಯಾ ಅವರನ್ನು ಮೊದಲು ಭೇಟಿಯಾದರು. ಆದರೆ, 1940 ರಲ್ಲಿ ಅವರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು. ಮನೋಯೆಲ್ ಮರಿಯಾ ಅವರನ್ನು ಪ್ರೀತಿಯಿಂದ ನೋಡಿ ಅವರು ತಮ್ಮ ಜೀವನ ಸಂಗಾತಿಯಾಗಬೇಕೆಂದು ನಿರ್ಧರಿಸಿದರು. ಅವರು ಮರಿಯಾ ಬಳಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಮರಿಯಾ ಕೂಡ ಒಪ್ಪಿಕೊಂಡರು.
ಅವರ ಪ್ರೀತಿ ಬಲವಾಗಿದ್ದರೂ, ಕುಟುಂಬದ ಸದಸ್ಯರಿಂದ ಸ್ವಲ್ಪ ವಿರೋಧ ವ್ಯಕ್ತವಾಯಿತು. ಆದರೆ, ಅವರ ದೃಢತೆ ಎಲ್ಲ ವಿರೋಧಗಳನ್ನು ಮೆಟ್ಟಿನಿಂತಿದ್ದು, 1940 ರಲ್ಲಿ ಅವರು ವಿವಾಹವಾದರು. ಕಷ್ಟಸುಖಗಳಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ, ತಂಬಾಕು ಸುತ್ತುವ ಮೂಲಕ ಜೀವನ ಸಾಗಿಸಿದರು. ಜೀವನವು ಅವರಿಗೆ ಅನೇಕ ಸವಾಲುಗಳನ್ನು ಒಡ್ಡಿತು, ಆದರೆ ಅವರು ಅವೆಲ್ಲವನ್ನೂ ಒಟ್ಟಿಗೆ ಎದುರಿಸಿದರು.
ಇಂದು, 105 ವರ್ಷ ವಯಸ್ಸಿನ ಮನೋಯೆಲ್ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ, ಮರಿಯಾ ಕೂಡ ಶತಕ ದಾಟಿದ್ದಾರೆ, ತಮ್ಮ ಪ್ರೀತಿಯ ಸಂಗಾತಿಯೊಂದಿಗೆ ಇದ್ದಾರೆ. ಅವರ ದಿನಚರಿ ಸರಳವಾಗಿದೆ ಆದರೆ ಬಹಳ ಅರ್ಥಪೂರ್ಣವಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ, ಅವರು ಲಿವಿಂಗ್ ರೂಮ್‌ನಲ್ಲಿ ರೇಡಿಯೊದಲ್ಲಿ ರೋಸರಿ ಪ್ರಾರ್ಥನೆಯನ್ನು ಕೇಳುತ್ತಾರೆ, ನಂತರ ದೂರದರ್ಶನದಲ್ಲಿ ಪ್ರಸಾರವಾಗುವ ಸಾಮೂಹಿಕ ಪ್ರಾರ್ಥನೆಯನ್ನು ನೋಡುತ್ತಾರೆ.
ಅವರ ಅಸಾಧಾರಣ ಮತ್ತು ನಿರಂತರ ದಾಂಪತ್ಯದ ರಹಸ್ಯದ ಬಗ್ಗೆ ಕೇಳಿದಾಗ, ಮರಿಯಾ ಮತ್ತು ಅವರ ಕುಟುಂಬ ಸರಳವಾಗಿ “ಪ್ರೀತಿ” ಎಂದು ಉತ್ತರಿಸುತ್ತಾರೆ.
ಮನೋಯೆಲ್ ಮತ್ತು ಮರಿಯಾ ಪ್ರಸ್ತುತ ಅತಿ ಹೆಚ್ಚು ಕಾಲ ಬಾಳಿದ ದಂಪತಿ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದರೂ, ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ದಾಖಲಾದ ವಿವಾಹವು ಡೇವಿಡ್ ಜಾಕೋಬ್ ಹಿಲ್ಲರ್ (ಜನನ 1789) ಮತ್ತು ಸಾರಾ ಡ್ಯಾವಿ ಹಿಲ್ಲರ್ (ಜನನ 1792) ಅವರದ್ದಾಗಿತ್ತು. ಅವರು ಸಾರಾ 1898 ರಲ್ಲಿ ನಿಧನರಾಗುವವರೆಗೂ 88 ವರ್ಷ ಮತ್ತು 349 ದಿನಗಳ ಕಾಲ ವಿವಾಹಿತರಾಗಿದ್ದರು.