ಭಾರತೀಯ ಬಿಲಿಯನೇರ್ ಗಳ ಪಟ್ಟಿ ಮಾಡಿದ್ರೆ ಅದ್ರಲ್ಲಿ ಪ್ರಥಮರಾಗಿ ಕಾಣಸಿಗೋದು ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ಗೌತಮ್ ಸಿಂಘಾನಿಯಾ ಸೇರಿದಂತೆ ಕೆಲವೇ ಕೆಲವು ಹೆಸರುಗಳು. ಈ ಕೈಗಾರಿಕೋದ್ಯಮಿಗಳು ಸಾಮಾನ್ಯ ಜನರಿಂದ ದೂರವಿದ್ರೂ ಇವರ ಅತಿರಂಜಿತ ಜೀವನಶೈಲಿಯು ಸಾಮಾನ್ಯರು ಸೇರಿದಂತೆ ಪಾಪರಾಜಿಗಳ ಗಮನ ಸೆಳೆಯುತ್ತದೆ.
ರೇಮಂಡ್ ಗ್ರೂಪ್‌ನ ಮುಖ್ಯಸ್ಥರಾಗಿರುವ ಗೌತಮ್ ಸಿಂಘಾನಿಯಾ ಅವರು ದುಬಾರಿ ಕಾರ್ ಗಳನ್ನು ಹೊಂದಿದ್ದು ಆಗಾಗ್ಗೆ ಗಮನ ಸೆಳೆಯುತ್ತಾರೆ. ಇದೀಗ ಇವರ ಐಷಾರಾಮಿ ಬದುಕಿನ ಬಗ್ಗೆ ಮತ್ತೊಂದು ವಿಷಯ ಹೊರಬಿದ್ದಿದ್ದು ಮುಖೇಶ್ ಅಂಬಾನಿಯವರ 15,000 ಕೋಟಿ ರೂಪಾಯಿ ಮೌಲ್ಯದ ಮಹಲ್ ಆಂಟಿಲಿಯಾಕ್ಕಿಂತ 10 ಮಹಡಿ ಎತ್ತರದ ಮಹಲ್ ನಿರ್ಮಿಸುತ್ತಿದ್ದಾರಂತೆ.
ಗೌತಮ್ ಸಿಂಘಾನಿಯಾ ಅವರು ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರೇಮಂಡ್ ಗ್ರೂಪ್ ವಿಶ್ವದ ಅತಿದೊಡ್ಡ ಸೂಟಿಂಗ್ ಫ್ಯಾಬ್ರಿಕ್ ಉತ್ಪಾದಕವಾಗಿದೆ. 11000 ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿರುವ ಸಿಂಘಾನಿಯಾ ಇತರ ವಲಯಗಳಲ್ಲೂ ವ್ಯವಹಾರವನ್ನು ವಿಸ್ತರಿಸುತ್ತಿದ್ದಾರೆ. ಅವರು ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ವೇಗದ ಕಾರುಗಳು, ಜೆಟ್‌ಗಳು ಮತ್ತು ದೋಣಿಗಳನ್ನು ಹೊಂದಿರುವ ಅವರು ದುಬಾರಿ ಬೆಲೆಯ ಕಾರ್ ಗಳನ್ನು ಖರೀದಿಸುತ್ತಲೇ ಇರುತ್ತಾರೆ.
ಗೌತಮ್ ಸಿಂಘಾನಿಯಾ ಅವರು ಇತ್ತೀಚಿಗೆ 4 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೊಸ ಮಾಸೆರೋಟಿ MC20 ಇಟಾಲಿಯನ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಸಿಂಘಾನಿಯಾ ಅವರು ಭಾರತದಲ್ಲಿ ಮಾಸೆರೋಟಿ MC20 ನ ಮೊದಲ ಖರೀದಿದಾರರಲ್ಲದಿದ್ದರೂ, ಕೆಂಪು ಬಣ್ಣದ ಮಾಸೆರೋಟಿ MC20 ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ.
ಹೊಸ ಮಾಸೆರೋಟಿ MC20 ಜೊತೆಗೆ ಗೌತಮ್ ಸಿಂಘಾನಿಯಾ ಅವರು ಮೆಕ್‌ಲಾರೆನ್ 570S, ಮೆಕ್‌ಲಾರೆನ್ 720S, ಲಿಂಕನ್ ಜೆಫಿರ್ ಹೊಟ್ರೋಡ್, 1973 ಪಾಂಟಿಯಾಕ್ ಟ್ರಾನ್ಸ್ AM SD, ಲೋಟಸ್ ಎಲಿಸ್, ಹೋಂಡಾ S2000, ಫೆರಾರಿ 296 GTB ಸೇರಿದಂತೆ ಹಲವು ಕಾರ್ ಹೊಂದಿದ್ದಾರೆ. ಇದರ ಹೊರತಾಗಿ ಸಿಂಘಾನಿಯಾ ಸಂಪೂರ್ಣವಾಗಿ ಬರ್ಮಾ ತೇಗದ ಮರದಿಂದ ನಿರ್ಮಿಸಲಾದ ಟ್ರೈ-ಡೆಕ್ ಐಷಾರಾಮಿ ವಿಹಾರ ನೌಕೆ ಮೂನ್‌ರೇಕರ್ ಅನ್ನು ಹೊಂದಿದೆ. ಇಷ್ಟೇ ಅಲ್ಲದೇ ಅವರು ಬೊಂಬಾರ್ಡಿಯರ್ ಚಾಲೆಂಜರ್ 604 ಬಿಸಿನೆಸ್ ಜೆಟ್ ಮತ್ತು ಮೂರು ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ.