ದೊಡ್ಡ ಕನಸುಗಳನ್ನು ನನಸು ಮಾಡಲು ಯಾವುದೇ ನೆಪಗಳಿಲ್ಲ, ಕೇವಲ ಕಠಿಣ ಪರಿಶ್ರಮವೊಂದಿದ್ದರೆ ಸಾಕು. ಐಪಿಎಸ್ ಅಧಿಕಾರಿ ಶರಣ್ ಕಾಂಬ್ಳೆ ಇದೇ ರೀತಿ ಬದುಕಿದವರಲ್ಲಿ ಒಬ್ಬರು. ಇದು ಮಹಾರಾಷ್ಟ್ರದ ಸೋಲಾಪುರದ ನಿವಾಸಿಯಾದ ರಾಜಸ್ಥಾನ ಕೇಡರ್‌ನ ಐಪಿಎಸ್ ಅಧಿಕಾರಿ ಶರಣ್ ಕಾಂಬ್ಳೆಯವರ ಕಥೆ. ಕಾಂಬ್ಳೆಯವರ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದರು. ಆದರೆ, ಅವರು ಶರಣ್ ಕಾಂಬ್ಳೆಗೆ ಶಿಕ್ಷಣ ನೀಡಲು ಎಂದಿಗೂ ಹಿಂದೆ ಸರಿಯಲಿಲ್ಲ.
1993ರ ಸೆಪ್ಟೆಂಬರ್ 30 ರಂದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬರ್ಸಿ ತಾಲೂಕಿನ ತಡ್ವಾಲೆ ಗ್ರಾಮದಲ್ಲಿ ಜನಿಸಿದ ಶರಣ್ ಕಾಂಬ್ಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. 11 ಮತ್ತು 12ನೇ ತರಗತಿಯನ್ನು 12 ಕಿಲೋಮೀಟರ್ ದೂರದ ನೆರೆಯ ಗ್ರಾಮದ ಶಾಲೆಯಲ್ಲಿ ಓದಿದರು. ಇದರ ನಂತರ, ಅವರು ವಾಲ್ಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್, ಸಾಂಗ್ಲಿಯಿಂದ ಬಿ.ಟೆಕ್ ಮಾಡಿದ್ದು, ಬಳಿಕ ಐಐಎಸ್ಸಿಯಿಂದ ಪಿಜಿ ಮಾಡಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ (ಐಐಎಸ್ಸಿ) ನಿಂದ ಪಿಜಿ ಮಾಡಿದ ನಂತರ, ಅವರಿಗೆ ವಾರ್ಷಿಕ 20 ಲಕ್ಷ ರೂಪಾಯಿ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಪ್ರಸ್ತಾಪ ಬಂದಿತು.
ಆದರೆ, ಅಷ್ಟರೊಳಗೆ ಅವರು ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದ್ದರು. ಅವರ ತಂದೆ ಗೋಪಿನಾಥ್ ಕೂಡ ತಮ್ಮ ಮಗ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ಆದ್ದರಿಂದ ಕಾಂಬ್ಳೆ ಈ ಉದ್ಯೋಗದ ಪ್ರಸ್ತಾಪವನ್ನು ತಿರಸ್ಕರಿಸಿ ದೆಹಲಿಗೆ ತೆರಳಿ ಯುಪಿಎಸ್‌ಸಿ ತಯಾರಿಯನ್ನು ಪ್ರಾರಂಭಿಸಿದರು. ಶರಣ್ ಕಾಂಬ್ಳೆ ದೆಹಲಿಗೆ ತೆರಳಿ ಯುಪಿಎಸ್‌ಸಿ ತಯಾರಿಯನ್ನು ಪ್ರಾರಂಭಿಸಿದರಾದರೂ ಬಡತನವು ಅವರ ಹಾದಿಗೆ ಅಡ್ಡಿಯಾಯಿತು. ಅಂತಹ ಪರಿಸ್ಥಿತಿಯಲ್ಲಿ, ಅವರು ಮಹಾರಾಷ್ಟ್ರ ಸರ್ಕಾರದ ವಿದ್ಯಾರ್ಥಿವೇತನ ಯೋಜನೆ ಪರೀಕ್ಷೆಯನ್ನು ನೀಡಿದರು. ಅದರಲ್ಲಿ ಉತ್ತೀರ್ಣರಾದ ನಂತರ, ಅವರು ಎಂಟು ತಿಂಗಳವರೆಗೆ ತಿಂಗಳಿಗೆ 12000 ರೂಪಾಯಿ ವಿದ್ಯಾರ್ಥಿ ವೇತನವನ್ನು ಪಡೆಯಲು ಪ್ರಾರಂಭಿಸಿದರು.
ಇದರಿಂದ ಅವರು ಪರೀಕ್ಷೆಗೆ ತಯಾರಾಗಲು ಸಾಧ್ಯವಾಯಿತು. ಶರಣ್ ಕಾಂಬ್ಳೆ ಯುಪಿಎಸ್‌ಸಿ ಸಿಎಪಿಎಫ್ 2019 ಅನ್ನು ಅಖಿಲ ಭಾರತ 8 ನೇ ಶ್ರೇಯಾಂಕದೊಂದಿಗೆ ಉತ್ತೀರ್ಣರಾದರು. ಇದರ ನಂತರ, ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ 2020 ಅನ್ನು ಅಖಿಲ ಭಾರತ 542 ನೇ ಶ್ರೇಯಾಂಕದೊಂದಿಗೆ ಉತ್ತೀರ್ಣರಾಗುವ ಮೂಲಕ ಐಪಿಎಸ್ ಆದರು. ಇದರ ನಂತರ, ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ 2021 ರಲ್ಲಿ 127 ನೇ ಶ್ರೇಯಾಂಕವನ್ನು ಪಡೆದರು. ಈ ಬಾರಿ ಅವರಿಗೆ ಐಎಫ್‌ಎಸ್ ಕೇಡರ್ ಸಿಕ್ಕಿತು. ಆದರೆ ಅವರು ಐಪಿಎಸ್ ಅನ್ನು ಆಯ್ಕೆ ಮಾಡಿಕೊಂಡರು.