ಕಷ್ಟಪಟ್ಟು ದುಡಿದು, ಛಲದಿಂದ ಗುರಿ ಸಾಧಿಸಿದವರ ಯಶೋಗಾಥೆಗಳು ಸ್ಫೂರ್ತಿದಾಯಕವಾಗಿರುತ್ತವೆ. ಹಿಮಾಚಲ ಪ್ರದೇಶದ ಬೆಟ್ಟಗುಡ್ಡಗಳ ಗ್ರಾಮದಿಂದ ಬಂದು ಅಮೆರಿಕಾದಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ ಜಯ್ ಚೌಧರಿ ಅವರ ಕಥೆ ಅಂತಹದ್ದೇ.
ಜಯ್ ಚೌಧರಿ, ಹಿಮಾಚಲ ಪ್ರದೇಶದ ಪನೋಹ್ ಗ್ರಾಮದವರು. ಬಡ ರೈತ ಕುಟುಂಬದಲ್ಲಿ ಜನಿಸಿದ ಅವರಿಗೆ ಉದ್ಯಮಶೀಲತೆಯ ಕನಸು ಇರಲಿಲ್ಲ. ಅವರ ಹುಟ್ಟೂರು ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು.
ಶಾಲಾ ದಿನಗಳಲ್ಲಿ ಮರದ ಕೆಳಗೆ ಕುಳಿತು ಓದಿದ ಜಯ್ ಚೌಧರಿ, ವಿದೇಶದಲ್ಲಿ ಓದುವ ಕನಸು ಕಂಡಿರಲಿಲ್ಲ. ಟಾಟಾ ಗ್ರೂಪ್ ಸಂಸ್ಥೆ ಅವರ ಉನ್ನತ ಶಿಕ್ಷಣಕ್ಕೆ ನೆರವಾಯಿತು. ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಎಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಝೆಡ್ ಸ್ಕೇಲರ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆಯ ಸ್ಥಾಪಕರಾದ ಜಯ್ ಚೌಧರಿ, ಫೋರ್ಬ್ಸ್ ವರದಿ ಪ್ರಕಾರ $11.7 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಮೆರಿಕಾದಲ್ಲಿ ಅತಿ ಹೆಚ್ಚು ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.